ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ ಬದಲಾವಣೆಗೆ ಏಕಕಾಲಕ್ಕೆ ಇ- ಟೆಂಡರ್‌

KannadaprabhaNewsNetwork | Published : Apr 17, 2025 12:02 AM

ಸಾರಾಂಶ

ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಾವಣೆಗೆ ಏಕಕಾಲಕ್ಕೆ ಟೆಂಡರ್‌ ಕರೆಯಲು ತುಂಗಭದ್ರಾ ಮಂಡಳಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ದೊರೆತಿದೆ. ವಾರದಲ್ಲೇ ಮಂಡಳಿ ಇ-ಟೆಂಡರ್‌ ಕರೆಯಲಿದೆ.

ಮಂಡಳಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ । 19ನೇ ಕ್ರಸ್ಟ್‌ ಗೇಟ್‌ ಟೆಂಡರ್‌ ಇಂದು ಓಪನ್‌/ ಏಜೆನ್ಸಿ ನಿಗದಿಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಾವಣೆಗೆ ಏಕಕಾಲಕ್ಕೆ ಟೆಂಡರ್‌ ಕರೆಯಲು ತುಂಗಭದ್ರಾ ಮಂಡಳಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ದೊರೆತಿದೆ. ವಾರದಲ್ಲೇ ಮಂಡಳಿ ಇ-ಟೆಂಡರ್‌ ಕರೆಯಲಿದೆ.

ತುಂಗಭದ್ರಾ ಮಂಡಳಿ ಛೇರ್ಮನ್‌ ಎಸ್‌.ಎನ್. ಪಾಂಡೆ ಅವರ ನೇತೃತ್ವದಲ್ಲಿ ನಡೆದ ಮಂಡಳಿ ಸಭೆಯಲ್ಲಿ ಆಂಧ್ರಪ್ರದೇಶದ ಎನ್‌ಡಿಟಿ ಸರ್ವಿಸ್‌ ಸಂಸ್ಥೆ ಮೂರು ಸಂಪುಟಗಳಲ್ಲಿ ನೀಡಿರುವ ವರದಿ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಜಲಾಶಯದ ಕ್ರಸ್ಟ್‌ ಗೇಟ್‌ಗಳು ಶೇ.40ರಷ್ಟು ಮುಕ್ಕಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದು, ಎಲ್ಲಾ ಗೇಟ್‌ಗಳನ್ನು ಬದಲಿಸಲು ಸೂಚಿಸಿರುವ ಬಗ್ಗೆಯೂ ಚರ್ಚಿಸಲಾಯಿತು. ಈ ಮಧ್ಯೆ ಏ. 8 ಮತ್ತು 9ರಂದು ಪರಿಣತ ತಜ್ಞ ಕನ್ನಯ್ಯ ನಾಯ್ಡು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ ಎಲ್ಲಾ ಗೇಟ್‌ಗಳನ್ನು ಬದಲಿಸಲು ಸೂಚಿಸಿದ್ದಾರೆ. ಜೊತೆಗೆ ಈ ವರ್ಷ ಜಲಾಶಯ ಸಂಪೂರ್ಣ ಭರ್ತಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು ಎಂದು ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ದೃಢಪಡಿಸಿವೆ.

ಜಲಾಶಯದ ಎಲ್ಲ 32 ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಲು ಒಮ್ಮಲೇ ಟೆಂಡರ್‌ ಕರೆಯಬೇಕು. ಇದು ತುರ್ತಾಗಿ ನಡೆಯಬೇಕು. ಆ ಬಳಿಕ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಬೇಕು ಎಂದು ಸಭೆಯಲ್ಲಿ ಛೇರ್ಮನ್‌ ಸೂಚಿಸಿದ್ದಾರೆ.

ಜಲಾಶಯದ ರಕ್ಷಣೆ ಮಾಡಬೇಕು. ರೈತರ ಹಿತದೃಷ್ಟಿಯಿಂದ ಜಲಾಶಯದ ಗೇಟ್‌ಗಳನ್ನು ಬದಲಿಸಬೇಕಿದೆ. ಹಾಗಾಗಿ ಕೂಡಲೇ ಇ-ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು. ಮೊದಲು ಎಲ್ಲ ಗೇಟ್‌ಗಳನ್ನು ಬದಲಿಸಲು ಇ- ಟೆಂಡರ್‌ ಕರೆಯಿರಿ, ನೀರಿನ ಹರಿವು ಪ್ರಮಾಣ ಹಾಗೂ ಗೇಟ್‌ ಅಳವಡಿಕೆ ಸಾಧಕ ಬಾಧಕ ನೋಡಿಕೊಂಡು ಮೊದಲ ಹಂತದಲ್ಲಿ ಎಷ್ಟು ಗೇಟ್‌ಗಳನ್ನು ಅಳವಡಿಸೋಣ ಎಂಬುದರ ಬಗ್ಗೆ ನಿರ್ಧರಿಸೋಣ ಎಂದು ಸಭೆಯಲ್ಲಿ ಮಂಡಳಿ ಛೇರ್ಮನ್‌ ಸೂಚಿಸಿದ್ದಾರೆ ಎಂದು ಮಂಡಳಿ ಮೂಲಗಳು ತಿಳಿಸಿವೆ.

19ನೇ ಗೇಟ್‌ ಟೆಂಡರ್‌ ಇಂದು ಓಪನ್‌:

ಜಲಾಶಯದ 19ನೇ ಕ್ರಸ್ಟ್‌ ಗೇಟ್‌ 2024ರ ಆಗಸ್ಟ್‌ 10ರಂದು ಕಳಚಿ ಬಿದ್ದಿತ್ತು. ಈ ಜಲಾಶಯಕ್ಕೆ ಸ್ಟಾಪ್‌ ಲಾಗ್ ಅಳವಡಿಕೆ ಮಾಡಲಾಗಿತ್ತು. ಈಗ ಈ ಗೇಟ್‌ಗೆ ಕ್ರಸ್ಟ್‌ ಗೇಟ್‌ ಕೂರಿಸಲು ಇ-ಟೆಂಡರ್‌ ಕರೆದಿದ್ದು, ಏ.17ರಂದು ಬಿಡ್‌ ಓಪನ್‌ ಆಗಲಿದೆ. ಯಾವ ಏಜೆನ್ಸಿ ಎಂಬುದು ಪಕ್ಕಾ ಆಗಲಿದೆ ಎಂದು ಮಂಡಳಿ ಮೂಲಗಳು ಖಚಿತಪಡಿಸಿವೆ.

Share this article