4ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ ಅಲೋಕ್‍ಕುಮಾರ್ ಸಲಹೆ ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಐಮಂಗಲದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ 4ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ಬುನಾದಿ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಗೆ ಆಯ್ಕೆಯಾಗುವವರು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಇದರಿಂದ ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಆಸ್ತಿಪಾಸ್ತಿ ಕಾಪಾಡಿ ಜನರಿಗೆ ಭದ್ರತೆ ಒದಗಿಸುವ ಮಹತ್ತರ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದ್ದು ಅದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೇ ನೊಂದವರಿಗೆ ನ್ಯಾಯ ದೊರಕಿಸಲು ಮುಂದಾಗಿ ಎಂದು ಹೇಳಿದರು.ಸಮಾಜದಲ್ಲಿ ಪೊಲೀಸ್ ಇಲಾಖೆ ಅತೀ ಹೆಚ್ಚಾಗಿ ಗುರುತಿಸಿಕೊಳ್ಳುತ್ತದೆ. ಯಾವುದೇ ಒಬ್ಬ ಸಿಬ್ಬಂದಿಯಿಂದ ಸಣ್ಣ ತಪ್ಪುಗಳು ನಡೆದರು ಅದು ಅತೀ ಬೇಗ ಗೋಚರಿಸಿ ಇಲಾಖೆಯ ಮೇಲೆ ಹಾಗೂ ನಿಷ್ಠಾವಂತ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಅನುವು ಮಾಡಿಕೊಡಬೇಡಿ. ಕರ್ತವ್ಯದ ವೇಳೆ ಶಿಸ್ತು ಪಾಲನೆ ಮಾಡಬೇಕು. ಈಗ ಪ್ರಶಿಕ್ಷಣಾರ್ಥಿಗಳಾ ಗಿರುವವರಲ್ಲಿ ಅನೇಕರು ವಿವಿಧ ಉನ್ನತ ಹುದ್ದೆಗಳನ್ನು ಹೊಂದುವ ಬಯಕೆ ಹೊಂದಿದ್ದಾರೆ. ಅದು ಒಳ್ಳೆಯದೇ ಆದರೆ ಭವಿಷ್ಯದ ಚಿಂತೆಯಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಮರೆಯಬೇಡಿ. ನಾವು ಮಾಡುವ ಕೆಲಸದ ಬಗ್ಗೆ ಗೌರವ ಪ್ರೀತಿ ಇರಬೇಕು. ಆಗ ಮಾತ್ರ ನಾವು ಮಾಡುವ ಕೆಲಸವನ್ನು ಉತ್ತಮವಾಗಿ ಮಾಡಿ ಯಶಸ್ವಿಯಾಗಲು ಸಾಧ್ಯ.
ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ವೈಯಕ್ತಿಕ ಜೀವನಕ್ಕೂ ಹೆಚ್ಚು ಪ್ರಾಶಸ್ತ್ಯ ನೀಡಿ ತಮ್ಮನ್ನು ಆಶ್ರಯಿಸಿದವರಿಗೆ ಮಹತ್ವ ನೀಡಿ. ಇಲ್ಲಿನ ತರಬೇತಿ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಎಸ್‌ಪಿ ಎನ್.ಶ್ರೀನಿವಾಸ್, ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್, ಸಿಪಿಐಗಳಾದ ಎ.ಮಂಜುನಾಥ್, ಕಾಳಿಕೃಷ್ಣ, ಎಚ್.ವಿ.ಲೋಕೇಶ್, ಶಿವಕುಮಾರ್.ಡಿಆರ್‌ಪಿಐ ಆನಂದ್ ಬೂದಿಗೊಪ್ಪ, ಶಾಖಾಧೀಕ್ಷಕ ಮೋಹನ್‍ಕುಮಾರ್, ಸಹಾಯಕ ಆಡಳಿತಾಕಾರಿ ಪಿ.ಪುಷ್ಪ, ಎಆರ್‌ಎಸ್‍ಐಗಳಾದ ಶ್ರೀಧರ್, ಸುಧರ್ಶನ್ ರೆಡ್ಡಿ, ಪಿಎಸ್‍ಐ ಮೇಘನಾ ಹಾಗೂ ಹೊರಾಂಗಣ ಬೋಧಕರು, ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳಿದ್ದರು.