ಗದಗ: ಜಿಲ್ಲೆಯ ಶಾಲಾ ಶೌಚಾಲಯ ಸ್ಥಿತಿಗತಿಗಳ ನೈಜ ವರದಿ ನೀಡಬೇಕು ಜತೆಗೆ ಶಾಲಾ ಹಂತದಲ್ಲಿ ಶಾಲಾ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಮೇ ಅಂತ್ಯದೊಳಗಾಗಿ ಶೌಚಾಲಯಗಳು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿನ ಶಾಲಾ ಶೌಚಾಲಯ ಕುರಿತು ಸಭೆ ಜರುಗಿಸಿ ಮಾತನಾಡಿದರು.ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೌಚಾಲಯಗಳು ವ್ಯವಸ್ಥಿತವಾಗಿ ಇರುವಂತೆ ಕ್ರಮ ವಹಿಸಬೇಕು. ಸ್ವಚ್ಛತೆ ಹಾಗೂ ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯಗಳ ಸ್ಥಿತಿಗತಿ ಪರಿಶೀಲಿಸಿ ಸಮರ್ಪಕ ಬಳಕೆಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದರು.
ನಗರದ ಹಾಗೂ ಗ್ರಾಮೀಣ ಪ್ರದೇಶಗಳ ಶಾಲಾ ಮೂತ್ರಾಲಯ ಹಾಗೂ ಶೌಚಾಲಯಗಳ ಸ್ಥಿತಿಗತಿ ಪಿಪಿಟಿ ಮೂಲಕ ವೀಕ್ಷಣೆ ಮಾಡಿ ನಂತರ ಸಚಿವರು ಮಾತನಾಡಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಶೌಚಾಲಯಗಳ ದುರಸ್ತಿ ಬಗೆಗಿನ ಪಟ್ಟಿ ಮಾಡಬೇಕು. ಶಾಲಾ ಶೌಚಾಲಯ ಹಾಗೂ ಮೂತ್ರಾಲಯಗಳಿಗೆ ನೀರು ಪೂರೈಕೆ ಸಮಸ್ಯೆ ಇರುವ ಕುರಿತು ಪಟ್ಟಿ ಮಾಡಿ ಒದಗಿಸಬೇಕು. ಶಾಲೆಗಳಲ್ಲಿ ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೌಚಾಲಯದ ದುರಸ್ತಿಗೆ ₹10,000 ಒಳಗೆ, ₹10,000 ದಿಂದ ₹50,000 ಒಳಗಡೆ, ₹ 50,000 ರಿಂದ ₹ 70,000 ಒಳಗಡೆ ಹಾಗೂ ₹ 70,000 ದಿಂದ ₹ 1,00,000 ಒಳಗೆ ದುರಸ್ತಿ ವೆಚ್ಚ ಇರುವ ಶಾಲಾ ಶೌಚಾಲಯಗಳ ಪಟ್ಟಿ ತಯಾರಿಸಿ ಏ. 18 ರಂದು ಜರುಗುವ ಸಭೆಗೆ ಹಾಜರಾಗುವಂತೆ ನಿರ್ದೇಶಿಸಿದರು.ಜಿಲ್ಲೆಯ ಶೌಚಾಲಯಗಳ ಅವ್ಯವಸ್ಥೆ ಸ್ಥಿತಿಗತಿ ಗಂಭೀರವಾಗಿ ಪರಿಗಣಿಸಿ ಶೌಚಾಲಯಗಳು ಬಳಕೆಗೆ ಯೋಗ್ಯವೇ ಎಂಬುದರ ಕುರಿತು ನೈಜ ವರದಿ ನೀಡಬೇಕು. ಸಣ್ಣ ಪುಟ್ಟ ದುರಸ್ತಿ ಅಗತ್ಯವಿದ್ದಲ್ಲಿ ತಮ್ಮ ಹಂತದಲ್ಲಿ ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಪಂ ಸಿಇಒ ಭರತ್.ಎಸ್ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಶೌಚಾಲಯಗಳ ವಸ್ತುಸ್ಥಿತಿ ಕುರಿತು ನೀಡಿದ ವರದಿ ಸಮರ್ಪಕವಾಗಿಲ್ಲ. ಈಗಿರುವ ಶೌಚಾಲಯಗಳ ಸಣ್ಣ ಪುಟ್ಟ ವರದಿ ಮಾಡಿದರೆ ಎಷ್ಟು ಸರಿ ಹೋಗುತ್ತದೆ ಎನ್ನುವುದರ ಕುರಿತು ಮಾಹಿತಿ ನೀಡಿ. ಶಾಲೆಗಳಲ್ಲಿ ಶೌಚಾಲಯಗಳೇ ಇರದ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಶೌಚಾಲಯಗಳಿದ್ದು ಸಹ ನೀರಿನ ಸಂಪರ್ಕವಿರದ ಶೌಚಾಲಯಗಳ ಪಟ್ಟಿ ಮುಂದಿನ ಸಭೆಗೆ ತರುವಂತೆ ನಿರ್ದೇಶಿಸಿದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಶೌಚಾಲಯಗಳ ನಿರ್ವಹಣೆಗೆ ನೀಡಿರುವ ಅನುದಾನ ವೆಚ್ಚವಾಗಿಯೂ ಸಹ ಶೌಚಾಲಯ ಸುಸ್ಥಿತಿಯಲ್ಲಿಲ್ಲ ಎಂದರೆ ಹೇಗೆ..? ವಿನಾಕಾರಣ ಶೌಚಾಲಯ ನಿರ್ವಹಣಾ ವೆಚ್ಚ ಪೋಲಾಗುತ್ತಿದೆ ಎಂದೆನಿಸುವುದಿಲ್ಲವೇ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮಂಜಸ ಉತ್ತರ ನಿರೀಕ್ಷಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರುಡಿ ಮಾತನಾಡಿ, ಜಿಲ್ಲೆಯಲ್ಲಿ 689 ಶಾಲಾ ಶೌಚಾಲಯಗಳಿದ್ದು, ಅವುಗಳ ತಾಲೂಕುವಾರು ಸುಸ್ಥಿತಿ, ದುರಸ್ತಿ, ನಿರ್ವಹಣೆ ಕುರಿತು ವರದಿ ನೀಡಲಾಗುವುದು. ಈ ಕುರಿತು ಬಿಇಓಗಳಿಗೆ ಸೂಚಿಸಲಾಗಿದೆ ಎಂದರು.ತಾಲೂಕುವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಶಾಲಾ ಶೌಚಾಲಯಗಳ ಸಂಖ್ಯೆ ಹಾಗೂ ಸುಸ್ಥಿತಿ ಹಾಗೂ ದುರಸ್ತಿ ಯಲ್ಲಿರುವ ಶೌಚಾಲಯಗಳ ಮತ್ತು ನಿರ್ವಹಣೆ ಕುರಿತಂತೆ ವರದಿ ಸಭೆಗೆ ಮಂಡಿಸಿದರು.
ಸಭೆಯಲ್ಲಿ ಡಾ. ಎನ್.ಎಚ್.ನಾಗನೂರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟ್ಟೂರ, ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ ಸೇರಿದಂತೆ ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಬಿಆರ್‌ಸಿ, ಸಿಆರ್‌ಸಿ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.