ರಾಮಜಪದಿಂದ ಎಲ್ಲ ಲೋಪಗಳಿಗೂ ಪರಿಹಾರ: ಸುಬುಧೇಂದ್ರ ತೀರ್ಥ ಸ್ವಾಮೀಜಿ

KannadaprabhaNewsNetwork |  
Published : Apr 17, 2025, 12:02 AM IST
16ಎಚ್‌ಪಿಟಿ1- ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಶ್ರೀ ಸೀತಾರಾಮಚಂದ್ರ ಹಾಗು ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹದ ಸುವರ್ಣ ಮಹೋತ್ಸವ ಹಾಗೂ ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಬುಧವಾರ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಬಡವ, ಶ್ರೀಮಂತ, ಉನ್ನತ ಕುಲ, ಹಣ ಇದ್ದವರು ಎನ್ನದೇ ಎಲ್ಲರೂ ಜಪ ಮಾಡುವ ಮಂತ್ರ ರಾಮ ತಾರಕ ಮಂತ್ರವಾಗಿದೆ.

ಗುಂಡ್ಲವದ್ದಿಗೇರಿ ಗ್ರಾಮದಲ್ಲಿ ಪುರ ಪ್ರವೇಶ । ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹದ ಸುವರ್ಣ ಮಹೋತ್ಸವಕನ್ನಡಪ್ರಭ ವಾರ್ತೆ ಹೊಸಪೇಟೆ

ಬಡವ, ಶ್ರೀಮಂತ, ಉನ್ನತ ಕುಲ, ಹಣ ಇದ್ದವರು ಎನ್ನದೇ ಎಲ್ಲರೂ ಜಪ ಮಾಡುವ ಮಂತ್ರ ರಾಮ ತಾರಕ ಮಂತ್ರವಾಗಿದೆ. ರಾಮ ಜಪದಿಂದ ಎಲ್ಲ ಲೋಪಗಳಿಗೂ ಪರಿಹಾರ ಸಿಗಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಶ್ರೀ ಸೀತಾರಾಮಚಂದ್ರ ಹಾಗೂ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹದ ಸುವರ್ಣ ಮಹೋತ್ಸವ ಹಾಗೂ ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಆಶೀರ್ವಚನ ನೀಡಿದ ಶ್ರೀಗಳು, ರಾಮ ತಾರಕ ಜಪದಿಂದ ಎಲ್ಲರ ಕಷ್ಟಗಳು ಪರಿಹಾರ ಆಗಲಿ. ಮದುವೆ ಆಗದವರಿಗೆ ಮದುವೆ ಆಗಲಿ, ಮನೆ ಕಟ್ಟಿಸುವ ಸಂಕಲ್ಪ ತೊಟ್ಟವರು ಗೃಹ ನಿರ್ಮಾಣ ಮಾಡಲಿ. ರೈತರ ಬದುಕು ಕೂಡ ಹಸನಾಗಲಿ ಎಂದರು.

ಶಿವ ಪರಮಾತ್ಮ ಪಾರ್ವತಿ ದೇವಿಗೆ ಮಹಾ ವಿಷ್ಣುವಿನ ಸಹಸ್ರನಾಮ ಸ್ತೋತ್ರದ ಬಗ್ಗೆ ವಿವರಣೆ ನೀಡಿದ್ದು, ವಿಷ್ಣುವಿನ ಪರಮ ನಾಮ ಶ್ರೀರಾಮ ರಾಮ ರಾಮೇತಿ ಆಗಿದೆ. ಎಲ್ಲಾ‌ ನಾಮಗಳ ಸಾರ, ರಾಮ ನಾಮ ಆಗಿದೆ. ರಾಮ ಹೆಸರಿನಲ್ಲಿ ಎರಡು ಅಕ್ಷರಗಳಿವೆ. ರಾ ಅಕ್ಷರ ಎಲ್ಲ ರಾಶಿ, ರಾಶಿ ದೋಷಗಳ ಪರಿಹಾರ ಮಾಡಲಿದೆ. ಮ ಎಂದು ಉಚ್ಚರಿಸಿದಾಗ ಪರಿಹಾರ ಆದ ದೋಷ ಮತ್ತೆ ಒಳ ಹೊಕ್ಕುವುದಿಲ್ಲ. ರಾಮ, ನಾಮ ಜಪ, ಎಲ್ಲ ಪಾಪಗಳ ಪರಿಹಾರ ಮಾಡಲಿದೆ ಎಂದರು.

ಕಳೆದ 50 ವರ್ಷಗಳಿಂದ ಈ ದೇವಾಲಯದಲ್ಲಿ ಪ್ರತಿ ವರ್ಷ ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹ ನಡೆಸುತ್ತಿರುವುದು ಧಾರ್ಮಿಕ ಕಾರ್ಯ ಆಗಿದೆ ಎಂದರು.

ಈ ದೇವಾಲಯದಲ್ಲಿ ರಾಮ, ಕೃಷ್ಣ, ಶಿವ, ನವಗ್ರಹಗಳಿವೆ. ರೈತರು ಏಳು ದಿನ ಉಳುಮೆ ಕಾರ್ಯದ ಮಧ್ಯೆ ಪ್ರತಿ ವರ್ಷ ರಾಮಜಪ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ರಾಮಜಪ ಮಾಡಬೇಕು ಎಂದರು.

ಶ್ರೀ ಸೀತಾರಾಮಚಂದ್ರ ಹಾಗೂ ಶ್ರೀ ಪಾಂಡುರಂಗ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಗೋಪಾಲ್‌, ಖಜಾಂಚಿ ಜನಾರ್ದನ, ಟಿ.ವಿ. ರಾಮಚಂದ್ರಪ್ಪ, ಕಂಪ್ಲಿ ತಿಮ್ಮಪ್ಪ, ಗೋಪಾಲಪ್ಪ, ಕುರಿ ತಿಮ್ಮಪ್ಪ, ದೇಗುಲದ ಅರ್ಚಕ ಜಂಬನಗೌಡ, ಶ್ರೀಮಠದ ಭಕ್ತ ಗುರುರಾಜ ದಿಗ್ಗಾವಿ, ಗ್ರಾಮದ ಹಿರಿಯರು ಹಾಗೂ ಮುಖಂಡರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ