ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಕಾರ್ಯದರ್ಶಿ ಆಶಾಲತಾ ಎಂ.ವಿ. ಮಾತನಾಡಿ, ಕಳೆದ 20 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒಗಳಾಗಿ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ವಾರ್ಷಿಕ 750 ರು. ಇದ್ದ ಪ್ರೋತ್ಸಾಹಧನವನ್ನು ಬಳಿಕ 7000 ರು.ಗೆ ಏರಿಸಲಾಗಿದೆ. ಕಳೆದ ಮೂರು ವರ್ಷಗಳಿಂದ 12 ಸಾವಿರ ರು.ಗೆ ಏರಿಸುವ ಭರವಸೆ ನೀಡಲಾಗುತ್ತಿದ್ದರೂ ಜಾರಿಯಾಗಿಲ್ಲ. ಮಾಸಿಕ 2000 ರು.ನಂತೆ ವಾರ್ಷಿಕ 24,000 ರು. ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವ ಸಲಹೆಗಾರ್ತಿ ಲತಾ ಅಂಬೆಕಲ್ಲು ಸುಳ್ಯ ಮಾತನಾಡಿ, ಅಂಗನವಾಡಿ ವ್ಯಾಪ್ತಿ ಹೊರಗೆಯೂ ಬಿಎಲ್‌ಒಗಳು ಕೆಲಸ ಮಾಡಬೇಕಾಗುತ್ತದೆ. ನದಿ, ಬೆಟ್ಟಗಳನ್ನು ದಾಟಿ ಹೋಗಬೇಕಾಗುತ್ತದೆ. ಜತೆಗೆ ಇಲಾಖೆ ಕೆಲಸವನ್ನೂ ಮಾಡಬೇಕು. ಮೊಬೈಲ್ ಆ್ಯಪ್ ಬಳಕೆಗೆ ನಾವೇ ಹಣ ಹಾಕಿಕೊಳ್ಳಬೇಕು. ಪ್ರೋತ್ಸಾಹಧನ ಏರಿಕೆ ಮಾಡಿದರೆ ಈ ಖರ್ಚುಗಳನ್ನು ಸರಿದೂಗಿಸಲು ಅನುಕೂಲವಾಗಲಿದೆ. ಜತೆಗೆ ಬಿಎಲ್‌ಒಗಳಿಗೆ ಆರೋಗ್ಯ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.ಸಂಘದ ಜಿಲ್ಲಾಧ್ಯಕ್ಷೆ ತಾರಾ ಬಳ್ಳಾಲ್ ಪುತ್ತೂರು, ಮಂಗಳೂರು ನಗರ ಕಾರ್ಯದರ್ಶಿ ಆಶಾಲತಾ ಎಂ.ವಿ., ಬಂಟ್ವಾಳ ಕೋಶಾಧಿಕಾರಿ ರೇಣುಕಾ ಬಂಟ್ವಾಳ, ಬೆಳ್ತಂಗಡಿ ಉಪಾಧ್ಯಕ್ಷೆ ರಾಜೀವಿ, ವಿಟ್ಲ ಉಪಾಧ್ಯಕ್ಷೆ ಗುಲಾಬಿ, ಮಂಗಳೂರು ಗ್ರಾಮಾಂತರ ರಾಜ್ಯ ಪ್ರತಿನಿಧಿ ಚಂದ್ರಾವತಿ, ಬಂಟ್ವಾಳ ಘಟಕ ಅಧ್ಯಕ್ಷೆ ವಿಜಯವಾಣಿ, ಪುತ್ತೂರು ಅಧ್ಯಕ್ಷೆ ಕಮಲ ಇದ್ದರು.