ಸಣ್ಣ ನೀರಾವರಿ ಮೂಲಗಳ ನಿಖರ ಗಣತಿ ಮಾಡಿ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ

KannadaprabhaNewsNetwork |  
Published : Jun 23, 2025, 11:50 PM IST
ಸ | Kannada Prabha

ಸಾರಾಂಶ

ಅಂತರ್ಜಲದ ಪ್ರಮಾಣವನ್ನು ಅಂದಾಜಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ನೀರಿನ ಲಭ್ಯತೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿದೆ.

ಕಾರವಾರ: ಜಿಲ್ಲೆಯಲ್ಲಿ ನಡೆಯುವ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಸಣ್ಣ ನೀರಾವರಿಯ ಎಲ್ಲ ಮೂಲಗಳನ್ನು ಸಂಪೂರ್ಣ ಮತ್ತು ನಿಖರವಾಗಿ ಗಣತಿ ಮಾಡುವ ಮೂಲಕ ನೀರಾವರಿ ಮೂಲಗಳ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮೊಬೈಲ್ ಅಪ್ಲಿಕೇಷನ್ ಮೂಲಕ ನಡೆಯುವ 7ನೇ ಸಣ್ಣ ನೀರಾವರಿ ಗಣತಿ ಮತ್ತು 2ನೇ ನೀರಿನಾಸರೆಗಳ ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಗಣತಿಯಿಂದ ರಾಜ್ಯದಲ್ಲಿ ಸಣ್ಣ ನೀರಾವರಿಯ ವಿವಿಧ ಮೂಲಗಳನ್ನು ಸಂಪೂರ್ಣವಾಗಿ ಗಣತಿ ಮಾಡುವುದರ ಮೂಲಕ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ನೀರಾವರಿಯಾದ ಕ್ಷೇತ್ರದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗುವುದು. ಅಂತರ್ಜಲದ ಪ್ರಮಾಣವನ್ನು ಅಂದಾಜಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ನೀರಿನ ಲಭ್ಯತೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದರು.

ಗಣತಿ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಅಗೆದ ಬಾವಿಗಳು, ಆಳವಿಲ್ಲದ ಕೊಳವೆ ಬಾವಿಗಳು, ಮಧ್ಯಮ ಆಳವಾದ ಕೊಳವೆಬಾವಿಗಳು, ಆಳದ ಕೊಳವೆಬಾವಿಗಳು, ಮೇಲ್ಮೈ ಜಲ ಹರಿಯುವ ನೀರಾವರಿ ಯೋಜನೆಗಳು, ಏತ ನೀರಾವರಿ ಯೋಜನೆಗಳನ್ನು ಗಣತಿ ಮಾಡುವಂತೆ ತಿಳಿಸಿದರು.

ಗಣತಿದಾರರು ರೈತರೊಂದಿಗೆ ಮತ್ತು ಸ್ಥಳದ ಮಾಲೀಕರೊಂದಿಗೆ ಸ್ಥಳಗಳಿಗೆ ಭೇಟಿ ನೀಡಿ, ಅವರಿಗೆ ಯೋಜನೆಯ ಮಹತ್ವದ ಬಗ್ಗೆ ವಿವರಿಸಿ ಅತ್ಯಂತ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸೋಮಶೇಖರ ಮೇಸ್ತಾ, 5 ವರ್ಷಗಳಿಗೆ ಒಮ್ಮೆ ನಡೆಯುವ ಸಣ್ಣ ನೀರಾವರಿ ಗಣತಿ ಕಾರ್ಯವು ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದೆ. ಈ ಬಾರಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯುತ್ತಿದೆ. ಅತ್ಯಂತ ನಿಖರವಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. 2000 ಹೆಕ್ಟೇರ್ ಒಳಗಿನ ಅಚ್ಚುಕಟ್ಟು ಪ್ರದೇಶವನ್ನು ಸಣ್ಣ ನೀರಾವರಿ ಯೋಜನೆಗಳೆಂದು ಪರಿಗಣಿಸಲಾಗಿದ್ದು, 4ರಿಂದ 40 ಹೆಕ್ಟೇರ್ ಅಚ್ಚುಕಟ್ಟುಳ್ಳ ಯೋಜನೆಗಳು ಜಿಪಂ ಅಧೀನದಲ್ಲಿ ಬರಲಿದೆ. 2000 ಹೆಕ್ಟೇರ್‌ಗಿಂತ ಹೆಚ್ಚು ಅಚ್ಚಕಟ್ಟುಳ್ಳ ಯೋಜನೆಗಳು ಬೃಹತ್ ನೀರಾವರಿ ಇಲಾಖೆಯ ಅಧೀನದಲ್ಲಿ ಬರಲಿವೆ. ಈ ಗಣತಿ ಕಾರ್ಯದಲ್ಲಿ ಗಣತಿದಾರರು ಅತ್ಯಂತ ಜವಾಬ್ದಾರಿಯಿಂದ ಮತ್ತು ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ನಿಖರವಾದ ಮಾಹಿತಿ ಸಂಗ್ರಹಿಸಬೇಕು ಎಂದರು.

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಶಾಂತ್, ತಹಸೀಲ್ದಾರ್ ನಿಶ್ಚಲ್ ನರೋನ್ಹಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!