ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿ: ಡಿಸಿ ದಿವಾಕರ್‌

KannadaprabhaNewsNetwork |  
Published : Jun 16, 2024, 01:51 AM IST
ಹೊಸಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು. | Kannada Prabha

ಸಾರಾಂಶ

ಪೌರ ಕಾರ್ಮಿಕರಿಗೆ ಪ್ರತಿದಿನ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು.

ಹೊಸಪೇಟೆ: ಜಿಲ್ಲಾಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆಯಿತು.ಪೌರ ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನ, ಪೌರ ಕಾರ್ಮಿಕರ ಕಾಯಂ ನೇಮಕಾತಿ, ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ, ರಾಜ್ಯ ಸಫಾಯಿ ಕರ್ಮಚಾರಿಗಳ ನಿಗಮದ ವಿವಿಧ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಪೌರ ಕಾರ್ಮಿಕರಿಗೆ ಪ್ರತಿದಿನ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು. ಅವುಗಳನ್ನು ಧರಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ಪರಿಶೀಲಿಸಬೇಕು. ಪೌರಕಾರ್ಮಿಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮತ್ತು ಮಾಸ್ಟರ್ ಚೆಕ್‌ಅಪ್‌ನ್ನು ನಿಯಮಿತ ಮಾಡಿಸಬೇಕು ಎಂದು ಎಲ್ಲಾ ನಗರಸಭೆ, ಪುರಸಭೆ ಮತ್ತು ಪಪಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವುದರ ಬಗ್ಗೆ ನಿಯಮಾನುಸಾರ ಪರಿಶೀಲಿಸಬೇಕು. ಪೌರಕಾರ್ಮಿಕರಿಗೆ ಶೇ.24.10 ಮತ್ತು ಶೇ.20 ಅನುದಾನ ಮೀಸಲಿಟ್ಟಿದ್ದು ಸರ್ಕಾರಿ ಆದೇಶದನ್ವಯ ಅನುದಾನ ಉಪಯೋಗಿಸಬೇಕು. ಪೌರಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಮೊತ್ತವನ್ನು ಪಾವತಿಯ ಬಗ್ಗೆ ಹಾಗೂ ಪ್ರತಿ ಮಾಹೆ ವೇತನ ಚೀಟಿ ನೀಡುವ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು. ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ನಗರಸಭೆ, ಪುರಸಭೆ, ಪಪಂ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಾಣದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯಗಳು ಕಾಲಮಿತಿಯೊಳಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪೌರಕಾರ್ಮಿಕರಿಗೆ ಸುರಕ್ಷಿತ ಪರಿಕರಗಳನ್ನು ಖರೀದಿಸಿ ವಿತರಿಸಲಾಗಿದೆ. ಅವುಗಳನ್ನು ಧರಿಸಿಕೊಂಡು ಕೆಲಸ ನಿರ್ವಹಿಸಲು ಪೌರಕಾರ್ಮಿಕರಿಗೆ ಸೂಚಿಸಲಾಗಿದ್ದು, ಕಡ್ಡಾಯವಾಗಿ ಸುರಕ್ಷಿತ ದಿರಿಸುಗಳನ್ನು ಧರಿಸಿ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮರಿಯಮ್ಮನಹಳ್ಳಿ ಪಪಂನಿಂದ ಪೌರಕಾರ್ಮಿಕರಿಗೆ ವಿಶ್ರಾಂತಿಗಾಗಿ ಪಪಂ ಕಟ್ಟಡದಲ್ಲಿ ವಿಶ್ರಾಂತಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಕಮಲಾಪುರ ಪುರಸಭೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರಲ್ಲಿ ವಿಶ್ರಾಂತಿ ಗೃಹ ನಿರ್ಮಾಣ ವ್ಯವಸ್ಥೆ ಮಾಡಲಾಗುವುದು. ಹೂವಿನಹಡಗಲಿ ಪುರಸಭೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು ಅದರಲ್ಲಿ ವಿಶ್ರಾಂತಿ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ 70 ಶೌಚಾಲಯಗಳನ್ನು ನಿರ್ವಹಣೆಗಾಗಿ ಹೊರಗುತ್ತಿಗೆ ಏಜೆನ್ಸಿಯವರಿಗೆ ನೀಡಿದ್ದು, ಪ್ರತಿದಿನ ಸ್ವಚ್ಛತೆಯ ಬಗ್ಗೆ ನಗರಸಭೆಯಿಂದ ತಪಾಸಣೆ ನಡೆಸಲಾಗುತ್ತಿದ್ದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸಫಾಯಿ ಕರ್ಮಚಾರಿಗಳಿಗೆ ವಿವಿಧ ಸೌಲಭ್ಯ ನೀಡಲಾಗಿದೆ. ಹೂವಿನಹಡಗಲಿಯ ಪುರಸಭೆಯಲ್ಲಿ 12 ಪೌರಕಾರ್ಮಿಕರಿಗೆ ₹50,000 ಸಹಾಯಧನ ಮಂಜೂರಾಗಿದೆ. ಮತ್ತು ಪೌರ ಕಾರ್ಮಿಕರ 25 ಮಕ್ಕಳಿಗೆ ಟ್ಯಾಬ್ ವಿತರಿಸಲಾಗಿದೆ. ಹಗರಿಬೊಮ್ಮನಹಳ್ಳಿ ಪುರಸಭೆಯಿಂದ 7 ಜನ ಪೌರ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ವಿವಿಧ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಮತ್ತು ಮತ್ತಿತರ ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ