ಉಡುಪಿ : ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದು, ದೇಶದ ಭದ್ರತೆಯ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಗೃಹ ಇಲಾಖೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಏಷ್ಯಾದ ಅತೀ ದೊಡ್ಡ ಮೀನುಗಾರಿಕಾ ಬಂದರಾಗಿ ಗುರುತಿಸಿಕೊಂಡಿರುವ ಮಲ್ಪೆ ಬಂದರಿನಲ್ಲಿ ಕೆಲಸಕ್ಕಾಗಿ ಬಂದು ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ನೆಲೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಅಕ್ರಮ ವಲಸಿಗರಿಗೆ ಸಹಕರಿಸಿದವರನ್ನೂ ತಕ್ಷಣ ಬಂಧಿಸಿ ವಿಚಾರಣೆ ನಡೆಸಬೇಕಿದೆ.
ಈ ಜಾಲದ ಹಿಂದಿರುವ ಕಾಣದ ಕೈಗಳನ್ನು ತಕ್ಷಣ ಹೆಡೆಮುರಿ ಕಟ್ಟುವ ಕೆಲಸ ಪೊಲೀಸ್ ಇಲಾಖೆ ನಡೆಸಿ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ ಎಂದರು.ಮಲ್ಪೆ ಪ್ರದೇಶದಲ್ಲಿ ಮಾತ್ರವಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಇದ್ದು, ನಕಲಿ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಮಾಡಿ ಅಕ್ರಮವಾಗಿ ದೇಶದೊಳಗೆ ಕಳುಹಿಸುವ ಜಾಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದ ಮೂಲಕವೂ ತನಿಖೆ ನಡೆಸುವ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: 7 ಮಂದಿ ಅಕ್ರಮ ಬಾಂಗ್ಲಾ ವಲಸಿಗರ ಬಂಧನ
ಇಲ್ಲಿನ ಮಲ್ಪೆ ಸಮೀಪದ ಹೂಡೆ ಎಂಬಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಅವರಲ್ಲಿ ಮೊಹಮ್ಮದ್ ಮಾಣಿಕ್ ಹುಸೇನ್ (26) ಎಂಬಾತ ಶುಕ್ರವಾರ ದುಬೈಗೆ ತೆರಳಲು ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗ, ಅಲ್ಲಿನ ಎಮಿಗ್ರೇಶನ್ ಅಧಿಕಾರಿಗಳ ಕೈಯಲ್ಲಿ ನಕಲಿ ಪಾಸ್ ಪೋರ್ಟ್‌ನೊಂದಿಗೆ ಸಿಕ್ಕಿಬಿದ್ದಿದ್ದ.
ನಂತರ ಆತನನ್ನು ಮಲ್ಪೆ ಪೊಲೀಸರಿಗೆ ಒಪ್ಪಿಸಲಾಗಿತ್ತು. ಆತನ ಬಾಯಿ ಬಿಡಿಸಿದಾಗ ಇನ್ನೂ 6 ಮಂದಿ ಹೂಡೆ ಗ್ರಾಮದ ಗುಜ್ಜರಬೆಟ್ಟು ಎಂಬಲ್ಲಿ ಒಂದು ಮನೆಯಲ್ಲಿ ವಾಸವಾಗಿರುವುದು ಪತ್ತೆಯಾಯಿತು.ಅವರೆಲ್ಲರೂ 5 ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿ ಇಲ್ಲಿ ವಾಸವಾಗಿದ್ದರು. ಅವರು ಬಾಂಗ್ಲಾದಿಂದ ಪಶ್ಟಿಮ ಬಂಗಾಳವನ್ನು ಪ್ರವೇಶಿಸಿ, ನಂತರ ಉಡುಪಿಗೆ ಬಂದಿದ್ದರು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.