ಧಾರವಾಡ: ಮಾರ್ಚ್ 21ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅತ್ಯಂತ ಪಾರದರ್ಶಕ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣದಲ್ಲಿ ಜರುಗಬೇಕು. ಯಾವುದೇ ರೀತಿಯ ನಕಲು ನಡೆಯದಂತೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ನಿಯೋಜಿತರು ಪಾಲಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮೂಲ ಸೌಕರ್ಯ, ಸಿಸಿ ಟಿವಿ ಕಲ್ಪಿಸುವುದನ್ನು ಮೇಲಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪ್ರವಾಸ ಮಾಡಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ್ದು, ಯಾವುದೇ ಭಯ ಬೀತಿ ಇಲ್ಲದೆ, ಖುಷಿಯಿಂದ ಪರೀಕ್ಷೆ ಬರೆಯುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಲ್ಲಿನ ಬದಲಾವಣೆ ನೋಡಿ ಸಂತಸವಾಗಿದೆ ಎಂದರು.ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆಗಳು ತಲುಪಬೇಕು. ಕೇಂದ್ರಗಳಿಗೆ ಪರೀಕ್ಷಾ ಸಮಯದಲ್ಲಿ ಅನ್ಯ ವ್ಯಕ್ತಿಗಳು, ಸಂಬಂಧಪಡದವರು, ಮಾಧ್ಯಮಗಳಿಗೂ ಪ್ರವೇಶವಿಲ್ಲ. ವಿದ್ಯಾರ್ಥಿಗಳು ಶಾಂತ ರೀತಿಯಿಂದ ಮುಕ್ತವಾಗಿ ಬರೆಯುವಂತೆ ವಾತಾವರಣ ಇರಬೇಕು. ಪರೀಕ್ಷಾ ಕೇಂದ್ರಗಳ ಸುತ್ತ 144 ಕಲಂ ಜಾರಿ ಇರುತ್ತದೆ. ನಿಯೋಜಿತರು ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಪರೀಕ್ಷಾ ಸಿದ್ಧತೆ, ಪರೀಕ್ಷಾ ಕೇಂದ್ರಗಳಲ್ಲಿ ಸೌಕರ್ಯ, ಸಿ.ಸಿ. ಟಿವಿ ಅಳವಡಿಕೆ ಸೇರಿದಂತೆ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಜಯಶ್ರೀ ಕಾರೇಕರ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಇದ್ದರು. ಜಿಲ್ಲಾ ಯೋಜನಾ ಸಮನ್ವಯನಾಧಿಕಾರಿ ಎಸ್.ಎಂ.ಹುಡೇದಮನಿ ನಿರೂಪಿಸಿದರು.