ಎಸ್ಸೆಸ್ಸೆಲ್ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಿ

KannadaprabhaNewsNetwork |  
Published : Mar 20, 2024, 01:15 AM IST
ಸಭೆಯಲ್ಲಿ ವೈಶಾಲಿ.ಎಂ.ಎಲ್ ಮಾತನಾಡಿದರು. | Kannada Prabha

ಸಾರಾಂಶ

ಪರೀಕ್ಷಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪರಿಣಾಮಕಾರಿ ವಿಚಕ್ಷಣ ಜಾಗೃತ ದಳಗಳನ್ನು ನೇಮಿಸಿ ಪರೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆಯುವಂತೆ ಹಾಗೂ ಅವ್ಯವಹಾರಗಳು ನಡೆಯದಂತೆ ಕ್ರಮ ವಹಿಸಬೇಕು

ಗದಗ: ಜಿಲ್ಲೆಯಲ್ಲಿ ಮಾರ್ಚ್‌ ೨೫ರಿಂದ ಏಪ್ರಿಲ್ ೬ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗುತ್ತಿದ್ದು, ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಬೇಕು. ಯಾವುದೇ ಅಕ್ರಮಗಳು ನಡೆಯದಂತೆ ಹಾಗೂ ಲೋಪದೋಷಗಳಾಗದಂತೆ ಕ್ರಮ ವಹಿಸಬೇಕು. ಸಮಯ ಪರಿಪಾಲನೆ ಅತ್ಯವಶ್ಯವಾಗಿದ್ದು, ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಗೋಡೆ ಗಡಿಯಾರ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪರಿಣಾಮಕಾರಿ ವಿಚಕ್ಷಣ ಜಾಗೃತ ದಳಗಳನ್ನು ನೇಮಿಸಿ ಪರೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆಯುವಂತೆ ಹಾಗೂ ಅವ್ಯವಹಾರಗಳು ನಡೆಯದಂತೆ ಕ್ರಮ ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಒಟ್ಟಾರೆಯಾಗಿ ಪರೀಕ್ಷೆಗಳು ಯಶಸ್ವಿಯಾಗಿ ಜರುಗುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ ಇನ್ನುಳಿದವರಿಗೆ ಪರೀಕ್ಷಾ ಕೇಂದ್ರಗಳಿಗೆ ಅವಕಾಶ ನೀಡಬಾರದು. ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಸುವುದಕ್ಕೆ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್‌ ೨೫ರಿಂದ ಏಪ್ರಿಲ್ ೬ರ ವರೆಗೆ ಜರುಗಲಿವೆ. ಜಿಲ್ಲೆಯಲ್ಲಿ ಒಟ್ಟು ೬೦ ಪರೀಕ್ಷಾ ಕೇಂದ್ರಗಳಿದ್ದು, ೧೬೩೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ:

ಮಾರ್ಚ್‌ ೨೫ ರಂದು ಬೆಳಗ್ಗೆ ೧೦-೧೫ರಿಂದ ಮಧ್ಯಾಹ್ನ ೧-೩೦ರ ವರೆಗೆ ಪ್ರಥಮ ಭಾಷೆ, ಮಾರ್ಚ್‌ ೨೭ ರಂದು ಬೆಳಗ್ಗೆ ೧೦-೧೫ ರಿಂದ ೧-೩೦ರ ವರೆಗೆ ಸಮಾಜ ವಿಜ್ಞಾನ, ಮಾರ್ಚ್‌ ೩೦ರಂದು ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೧.೩೦ರ ವರೆಗೆ ವಿಜ್ಞಾನ, ಏಪ್ರಿಲ್ ೨ರಂದು ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೧.೩೦ರ ವರೆಗೆ ಗಣಿತ, ಏಪ್ರಿಲ್ ೩ ರಂದು ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ ರವರೆಗೆ ಅರ್ಥಶಾಸ್ತ್ರ, ಏಪ್ರಿಲ್ ೪ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ರ ವರೆಗೆ ತೃತೀಯ ಭಾಷೆ, ಏಪ್ರಿಲ್ ೬ರಂದು ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೧೫ರ ವರೆಗೆ ದ್ವಿತೀಯ ಭಾಷೆ ಪರೀಕ್ಷೆಗಳು ಜರುಗಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!