ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಮತ್ತು ಇತರ ವಸ್ತು ಕಳುವಾಗಿರುವ ಬಗ್ಗೆ ಸೂಕ್ತ ತನಿಖೆ ಮಾಡಲಾಗುವುದು ಎಂದು ಡಿಎಚ್ಒ ಅನಿಲ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಕ್ಯಾನಿಂಗ್ ಯಂತ್ರ ಕಳವು ಪ್ರಕರಣದಲ್ಲಿ ಈಗಾಗಲೇ ಡಿ ಗ್ರೂಪ್ ನೌಕರ ಕೆ ಜಿ ಪ್ರದೀಪ್ ಹಾಗೂ ಖಾಸಗಿ ಆ್ಯಂಬುಲೆನ್ಸ್ ಚಾಲಕ ಸೂಫಿಯಾನ್ ಎಂಬುವರು ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ವಸತಿಗೃಹಗಳ ಕಡೆಯಿಂದ ಸ್ಕ್ಯಾನಿಂಗ್ ಯಂತ್ರವನ್ನು ಆಸ್ಪತ್ರೆ ಒಳಗೆ ತೆಗೆದುಕೊಂಡು ಬಂದಿರುವುದು ಸಿಸಿ ಕ್ಯಾಮರಾದಲ್ಲಿ ಲಭ್ಯವಾಗಿರುತ್ತದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಮೇಲಧಿಕಾರಿಗಳ ನಿರ್ದೇಶನವಿಲ್ಲದೆ ಸ್ಕ್ಯಾನಿಂಗ್ ಯಂತ್ರವನ್ನು ಆಸ್ಪತ್ರೆಯಿಂದ ಕಳುವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪರಿಶೀಲಿಸಿದಾಗ ಮತ್ತೆ ಯಾವುದೇ ಮಾಹಿತಿ ನೀಡದೆ ಸದರಿ ಯಂತ್ರವನ್ನು ಆಸ್ಪತ್ರೆಗೆ ತಂದು ಇರಿಸಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ತಾವು ಖುದ್ದಾಗಿ ಆರೋಪಿಯನ್ನು ವಿಚಾರಿಸಿದಾಗ ಹಣದ ಅವಶ್ಯಕತೆ ಇದ್ದುದ್ದರಿಂದ ತಾವು ಕಳುವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಈಗಾಗಲೇ ಇಬ್ಬರ ಮೇಲೆ ಎಫ್ಐಆರ್ ದಾಖಲಾಗಿದ್ದು ಸೂಕ್ತ ತನಿಖೆ ನಡೆಸಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಹಾಗೂ ಇತರೆ ಪರಿಕರಗಳು ಕಳುವಾಗಿರುವ ಬಗ್ಗೆ ಸಾರ್ವಜನಿಕರು ಹಾಗೂ ಕರವೇ ಪದಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು ಸಾಧನ ಸಲಕರಣೆಗಳ ಸಂಪೂರ್ಣ ಮಾಹಿತಿ ನೀಡಲು ಸಲಕರಣೆಗಳ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗಿದೆ. ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್, ಕಂಟ್ರೋಲ್ ಮಾನಿಟರ್ ಕಳ್ಳತನ ಮಾಡಿರುವುದು ಪತ್ತೆಯಾದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯ ಸಿಬ್ಬಂದಿ ಪ್ರತಿಯೊಂದು ಕೆಲಸಕ್ಕೂ ಡಿ ಗ್ರೂಪ್ ನೌಕರರನ್ನೇ ಅವಲಂಬಿಸಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಯ ಮುಂಭಾಗದ 500 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಆ್ಯಂಬುಲೆನ್ಸ್ ವಾಹನಗಳನ್ನು ನಿಲ್ಲಿಸಬಾರದು ಹಾಗೂ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸ್ಕ್ಯಾನಿಂಗ್ ಎಕ್ಸರೇ ಹಾಗೂ ರಕ್ತ ಪರೀಕ್ಷಾ ಕೇಂದ್ರಗಳನ್ನು ತೆರೆಯಬಾರದು ಎಂದು ಸರ್ಕಾರದ ಸುತ್ತೋಲೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸರೇ ರಕ್ತಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಸೂಕ್ತವಾಗಿ ದೊರಕಿದರೆ ಬಡ ರೋಗಿಗಳು ಹೊರಗೆ ಹೋಗುವ ಪ್ರಮೇಯ ಇರುವುದಿಲ್ಲ. ಈ ಬಗ್ಗೆ ಹತ್ತು ದಿನದೊಳಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಡಾ. ಚೇತನ್, ಆಡಳಿತ ಅಧಿಕಾರಿ ಡಾ ದೇವರಾಜು , ಟಿಎಚ್ಒ ಡಾ.ವಿಜಯ್, ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕಾದರ್ ಇತರರು ಇದ್ದರು.