ಹಳಿಯಾಳ: ಯಶಸ್ಸಿಗೆ ಯಾವತ್ತೂ ಶಾರ್ಟ್‌ಕಟ್ ಇಲ್ಲ, ಶಾರ್ಟ್‌ಕಟ್ ಮೂಲಕ ಪಡೆದ ಯಶಸ್ಸು ಯಾವತ್ತೂ ಶಾಶ್ವತವಲ್ಲ. ಜೀವನದಲ್ಲಿ ಯಶಸ್ಸು ಪಡೆಯಲು ಆತ್ಮವಿಶ್ವಾಸ, ಧೈರ್ಯ ಹಾಗೂ ನಿರಂತರ ಪರಿಶ್ರಮ ಅಗತ್ಯವಾಗಿದ್ದು, ಯಶಸ್ಸು ಒಮ್ಮಿಂದೊಮ್ಮೆಲೆಯಾಗಲಿ, ತಕ್ಷಣವಾಗಿಯೂ ಸಿಗುವುದಿಲ್ಲ ಎಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ಹಾಗೂ ಕಾರವಾರ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ ಹೇಳಿದರು.
ಯಶಸ್ಸಿನ ಮಾರ್ಗ ಕಠಿಣ
ಯಶಸ್ಸಿನ ಹಾದಿಯು ಬಹಳ ಕಠಿಣವಾಗಿದೆ. ಯಶಸ್ಸು ಗಳಿಸಲು ಶಿಸ್ತು ಮತ್ತು ಕಠಿಣ ಪರಿಶ್ರಮ ಇರಬೇಕು ಎಂದ ಅವರು, ತಮ್ಮ ಜೀವನದ ಅನುಭವವವನ್ನು ಹಂಚಿಕೊಳ್ಳುತ್ತ ನಾನೂ ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ಸಾಕಷ್ಟು ಕಷ್ಟಪಟ್ಟು ಕಲಿತಿರುವ ಪರಿಣಾಮದಿಂದಾಗಿ ಈ ಹುದ್ದೆಗೆ ಬಂದಿದ್ದೇನೆ. ಆದುದರಿಂದ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಕೌಶಲ್ಯಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಸ್ವ ಉದ್ಯೋಗದ ಮೂಲಕ ಆತ್ಮನಿರ್ಭರರಾಗಬೇಕು ಎಂದು ಸಲಹೆ ನೀಡಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಇಡೀ ಸಂಸ್ಥೆಯ ವಿವಿಧ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಅಲ್ಲಿನ ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆ ಸಮಗ್ರವಾಗಿ ಅವಲೋಕಿಸಿದರು. ಮೋಟಾರ್ ವೈಂಡಿಂಗ್ ತರಬೇತಿ ಹಾಗೂ ಕೃಷಿ ಆಧಾರಿತ ತರಬೇತಿ ಉದ್ಯಮಗಳ ವಿಭಾಗಗಳನ್ನು ವೀಕ್ಷಿಸಿದ ಅವರು ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ ತರಬೇತಿಯ ಗುಣಮಟ್ಟ, ಕಲಿಕೆಯ ಅನುಭವ ಹಾಗೂ ಸ್ವ ಉದ್ಯೋಗ ಆರಂಭಿಸುವಲ್ಲಿ ಎದುರಾಗುವ ಸವಾಲುಗಳ ಕುರಿತು ಮಾಹಿತಿ ಕಲೆ ಹಾಕಿದರು. ಸಂಸ್ಥೆಯಲ್ಲಿ ನೀಡಲಾಗುವ ಊಟ ಮತ್ತು ವಸತಿ ವ್ಯವಸ್ಥೆ ಮತ್ತು ಪ್ರಾಯೋಗಿಕ ತರಬೇತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಯೋಜನಾಧಿಕಾರಿ ವಿನಾಯಕ ಚೌಹಾಣ್ ಸಂಸ್ಥೆಯಲ್ಲಿ ನೀಡುವ ವಿವಿಧ ತರಬೇತಿಗಳು ಹಾಗೂ ಸಂಸ್ಥೆಯಲ್ಲಿ ಮುಂದೆ ಕೈಗೊಳ್ಳಲಾಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.