ಕನ್ನಡಪ್ರಭ ವಾರ್ತೆ ಹಾಸನಪರೀಕ್ಷೆ ಎಂದಾಕ್ಷಣ ಭಯಪಡುವುದು ಬೇಡ. ಈ ಕುರಿತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಹಾಗೂ ಆತ್ಮವಿಶ್ವಾಸ ಶಿಬಿರ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಬಿ.ಕೆ. ಗಂಗಾಧರ್ ಕಿವಿಮಾತು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮುಂಬರುವ ವಾರ್ಷಿಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಕಾರಿಯಾಗುವ “ಪರೀಕ್ಷಾ ಸಿದ್ಧತೆ ಮತ್ತು ಆತ್ಮವಿಶ್ವಾಸ ಎಂಬ ವಿಶೇಷ ಶಿಬಿರವನ್ನು ಜ.20 ರ ಬೆಳಿಗ್ಗೆ ೧೦ ಗಂಟೆಗೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಶಿಬಿರದಲ್ಲಿ ಹಾಸನ ನಗರದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು. ಖ್ಯಾತ ಶಿಕ್ಷಣ ತಜ್ಞ ಎ.ಎಚ್. ಸಾಗರ್ ಅವರು ಪರೀಕ್ಷಾ ತಯಾರಿ, ಸಮಯ ನಿರ್ವಹಣೆ, ಒತ್ತಡ ನಿವಾರಣೆ ಹಾಗೂ ಆತ್ಮವಿಶ್ವಾಸ ವೃದ್ಧಿ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಲತಾ ಕುಮಾರಿ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ರೊ. ಪಾಲಾಕ್ಷ ಕೆ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಲರಾಮ್ ಕೆ.ಎನ್, ಹಾಸನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ರೋಟರಿ ಝೋನ್ ೯ರ ಸಹಾಯಕ ಗವರ್ನರ್ ಮಂಜುನಾಥ್ ಜೆ.ಎನ್., ವಲಯ ಸೇನಾನಿಗಳಾದ ಮಮತಾ ಪಾಟೀಲ್, ಕಾರ್ಯಕ್ರಮ ಮುಖ್ಯಸ್ಥ ಯೋಗೇಶ್ ಎಸ್., ರೋಟರಿ ಕ್ಲಬ್ ಹಾಸನ ರಾಯಲ್ ಅಧ್ಯಕ್ಷ ಟೈಮ್ಸ್ ಗಂಗಾಧರ್ ಬಿ.ಕೆ., ಕಾರ್ಯದರ್ಶಿ ರವಿ ಕುಮಾರ್ ಪಿ. ಹಾಗೂ ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ. ಅವರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಶಿಬಿರದಿಂದ ಪ್ರತಿವರ್ಷ ಸುಮಾರು ೧೨೦೦ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದೇ ಪರಂಪರೆಯನ್ನು ಮುಂದುವರೆಸುವ ಉದ್ದೇಶದಿಂದ ಈ ವರ್ಷವೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುವ ಈ ಮಹತ್ವದ ಕಾರ್ಯಕ್ರಮಕ್ಕೆ ಮಾಧ್ಯಮದ ಎಲ್ಲಾ ಸ್ನೇಹಿತರು ಆಗಮಿಸಿ, ಕಾರ್ಯಕ್ರಮವನ್ನು ಜನತೆಗೆ ತಲುಪಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ದಿಲೀಪ್, ಕಾರ್ಯಕ್ರಮದ ಛೇರ್ಮನ್ ಯೋಗೀಶ್, ಸಂಸ್ಥೆ ಮಾಜಿ ಅಧ್ಯಕ್ಷ ಸಚೀನ್, ಶ್ರೀನಂದ ಇತರರು ಉಪಸ್ಥಿತರಿದ್ದರು.