ಕನ್ನಡಪ್ರಭ ವಾರ್ತೆ ಶಿರಾ
ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಶಿಕ್ಷಣ ಹಂತ ಬಹಳ ಮುಖ್ಯವಾಗಿದ್ದು, ಬದುಕಿನ ವಿವಿಧ ಮಜಲುಗಳಿಗೆ ನಿಮ್ಮನ್ನು ಅಣಿಗೊಳಿಸುವಂತಹುದು. ಇಲ್ಲಿ ಉತ್ತಮವಾಗಿ ಕಲಿತು ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಆತ್ಮವಿಶ್ವಾಸ, ನಿರಂತರ ಅಭ್ಯಾಸ ಇದ್ದಲ್ಲಿ ಬದುಕಿನಲ್ಲಿ ಯಶಸ್ಸು ಖಂಡಿತ ಸಾದ್ಯ ಎಂದು ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಪಿ.ಎಚ್ ಮಹೇಂದ್ರಪ್ಪ ಹೇಳಿದರು.ಅವರು ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಕೇವಲ ನಿಯೋಜಿತ ಪಠ್ಯ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗದು. ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ವ್ಯಕ್ತಿತ್ವ ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲವು ಎಂದರು.
ಸಮಾರೋಪ ಭಾಷಣ ಮಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ ಹೊನ್ನಾಂಜನೇಯ ಅವರು, ವಿದ್ಯಾರ್ಥಿನಿಯರು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಇವರ ತತ್ವಾದರ್ಶ ರೂಢಿಸಿಕೊಳ್ಳಿ. ಭವಿಷ್ಯ ನೀವು ತಿಳಿದಷ್ಟು ಸುಲಭವಿರದು. ಬದ್ಧತೆ, ಸತತ ಪರಿಶ್ರಮದ ವ್ಯಕ್ತಿಗೆ ಭವಿಷ್ಯ ಉತ್ತಮವಾಗಿರುವುದೆಂದು ತಿಳಿಸಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಚಂದ್ರಯ್ಯ, ಜಾಗತೀಕರಣ, ಉದಾರೀಕರಣ ನಮಗೆ ವಿಪುಲ ಉದ್ಯೋಗ ದೊರಕಿಸಿಕೊಟ್ಟಿವೆಯಾದರೂ ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಸೇವಾ ಮನೋಭಾವ ಮರೆತು ಸುಲಿಗೆ ಕೇಂದ್ರಗಳಾಗಿ, ಉದ್ಯಮಗಳಾಗಿ ರೂಪಾಂತರಗೊಂಡಿರುವುದು ಆತಂಕಕಾರಿ. ಬೆಳೆಯುವ ಮಕ್ಕಳಾದ ನೀವು ವೈಜ್ಞಾನಿಕ, ವೈಚಾರಿಕ ವಿಚಾರಗಳ ಕಡೆ ಗಮನಹರಿಸಿ, ಮೌಢ್ಯವನ್ನು ಬಿಟ್ಟು ಪ್ರಶ್ನಿಸುವ ಗುಣ ನಿಮ್ಮದಾಗಲೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಧನಶಂಕರ್, ಹಾವನೂರು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಉಪನ್ಯಾಸಕರಾದ ಪರಮೇಶ್ವರ, ಮೆಣಸಗಿ, ಶಿವಶಂಕರ್, ಬೊಮ್ಮಲಿಂಗಪ್ಪ, ನಾಗರಾಜು, ಸತೀಶ್ ಕುಮಾರ್, ಆಯ್ತಾರಲಿಂಗಪ್ಪ, ಜಗದೀಶಯ್ಯ, ಡಾ ರವಿಪ್ರಸಾದ್, ಗೋವಿಂದರಾಜು, ಕಾಂತಮ್ಮ, ಸವಿತ, ಕಾಜಲ್, ಅಂಜನ, ಮಮತಾ, ಶಿವುಯಾದವ್, ಲೋಕೇಶ್, ರಾಜು, ತಿಪ್ಪೇಶ್, ವೀರೇಂದ್ರ ಸೇರಿದಂತೆ ಹಲವರು ಹಾಜರಿದ್ದರು.