2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ: ಕೆ.ಎಚ್. ಮುನಿಯಪ್ಪ

KannadaprabhaNewsNetwork |  
Published : Jul 11, 2025, 11:48 PM IST
11 ದೇವನಹಳ್ಳಿ 01 | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10,000 ನಿವೇಶನ ನೀಡುವ ಗುರಿ ಹೊಂದಲಾಗಿದೆ. ಬಡವರಿಗೆ ಮನೆ ಸೈಟು ನೀಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕುಂದಾಣ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆಯು 2027ಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಈ ಭಾಗದ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದಂತೆ ಎತ್ತಿನಹೊಳೆ ಯೋಜನೆಗೆ ಪರಿಷ್ಕೃತ ವೆಚ್ಚದ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದರಂತೆ ಅನುದಾನ ಶೀಘ್ರ ಬಿಡುಗಡೆಯಾಗಿ ಮುಂದಿನ 2027ಕ್ಕೆ ಕೋಲಾರ ಭಾಗದ ವರೆಗೆ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10,000 ನಿವೇಶನ ನೀಡುವ ಗುರಿ ಹೊಂದಲಾಗಿದೆ. ಬಡವರಿಗೆ ಮನೆ ಸೈಟು ನೀಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನಿವೇಶನ ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಹಂತ ಹಂತವಾಗಿ ನಿವೇಶನ ಹಂಚಲಾಗುವುದು. ಈಗಾಗಲೇ 2500 ಮನೆಗಳು ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಕೂಡ ಬಡವರಿಗೆ ಹಂಚಲಾಗುತ್ತದೆ ಎಂದರು.

ಜಿಲ್ಲಾ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಲು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆ ಗಳಿಂದ 250 ಹಾಸಿಗೆ ಸಾಮರ್ಥ್ಯದ ವರೆಗೆ ಮೇಲ್ದರ್ಜೆಗೇರಿಸಲು ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ಸಮಗ್ರ ಕೃಷಿ ಉತ್ಪಾದನೆ ಹೆಚ್ಚಿಸಲು ಸಂಬಂಧಿಸಿದ ಕೃಷಿ, ತೋಟಗಾರಿಕೆ, ರೇಷ್ಮೆಇಲಾಖೆ ಅಧಿಕಾರಿಗಳು ಒಂದು ಸಮಗ್ರ ವರದಿ ಸಿದ್ಧಪಡಿಸಿ ನಮಗೆ ನೀಡಿ ಮುಂದಿನ ಕ್ರಮದ ಬಗ್ಗೆ ಕೃಷಿ ಸಚಿವರೊಟ್ಟಿಗೆ ಚರ್ಚಿಸುತ್ತೇನೆ ಎಂದರು.

ಪಡಿತರ ವಿತರಣೆ ವೇಳಾಪಟ್ಟಿ ಪ್ರದರ್ಶಿಸಿ

ಪಡಿತರ ವಿತರಿಸುವ ದಿನಾಂಕ, ಸಮಯ, ಒಬ್ಬ ಫಲಾನುಭವಿಗೆ ಎಷ್ಟು ಆಹಾರಧಾನ್ಯ ವಿತರಿಸಲಾಗುವುದು ಎಂಬುದರ ಬಗ್ಗೆ ಪ್ರತಿ ಪಡಿತರ ಅಂಗಡಿ ಮುಂದೆ ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರದರ್ಶಿಸಬೇಕು. ಗ್ರಾಮೀಣ ಪ್ರದೇಶದಲ್ಲಿ 500 ರೇಷನ್ ಕಾರ್ಡ್ ಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಕಾರ್ಡ್ ಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ರಾಜ್ಯಾಧ್ಯಕ್ಷರಾದ ಎಚ್.ಎಂ ರೇವಣ್ಣ ಮಾತನಾಡಿ, ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಗ್ಯಾರಂಟಿ ತಲುಪಬೇಕು ಎಂಬುದು ಸರ್ಕಾರದ ಉದ್ದೇಶ. ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದೀವಿ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿದೆ. ಸೌಲಭ್ಯ ವಂಚಿತ ಅರ್ಹ ಫಲಾನುಭವಿಗಳ ಸಮಸ್ಯೆ ಬಗೆಹರಿಸಿ ಶೇ. 100ರಷ್ಟುಪ್ರಗತಿ ಸಾಧಿಸಿ ಎಂದರು.ಸಭೆಯಲ್ಲಿ ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ನೆಲಮಂಗಲ ಶಾಸಕರಾದ ಶ್ರೀನಿವಾಸ್, ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಎಂಎಲ್ಸಿ ರವಿ, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಯ ರಾಜ್ಯಾಧ್ಯಕ್ಷರಾದ ಎಚ್.ಎಂ ರೇವಣ್ಣ, ಉಪಾಧ್ಯಕ್ಷ ಸೂರಜ್ ಎಂ ಹೆಗಡೆ, ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಸಿಇಒ ಡಾ.ಕೆ.ಎನ್. ಅನುರಾಧ, ಎಸ್ಪಿ ಸಿಕೆ ಬಾಬಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೆಡಿಪಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

PREV