ಹಾವೇರಿ: ಕಾಲ ಹರಣವಿಲ್ಲದೆ ಕನಸು ಕಟ್ಟಿಕೊಂಡು ವಿಜಯದ ದಾರಿಯಲ್ಲಿ ಆತ್ಮವಿಶ್ವಾಸದಿಂದ ಜಾಗೃತರಾಗಿ ನಡೆಯುವ ಪ್ರತಿಭಾವಂತನಿಗೆ ಗುರಿ ಮುಟ್ಟುವುದು ಸುಲಭ ಸಾಧ್ಯ ಎಂದು ಸಾಹಿತಿ ಮಾರುತಿ ಶಿಡ್ಲಾಪೂರ ಹೇಳಿದರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈಗ ವಿಶ್ವಮಟ್ಟದ ಸ್ಪರ್ಧೆಯನ್ನು ಎದುರಿಸಿ ಯುವಕರು ಮುನ್ನಡೆಯಬೇಕಾಗಿದೆ. ನಾಳೆಗಳ ಸುಂದರ ಬದುಕಿಗೆ ಇಂದಿನಿಂದಲೇ ಪರಿಶ್ರಮ ಬೇಕು. ಸಂತಸದ ಓದು, ಉತ್ತಮ ಯಶಸ್ಸು ನೀಡಬಲ್ಲದು. ಬದಲಾದ ಕಾಲದಲ್ಲಿ ಮೌಲ್ಯಗಳನ್ನು ಉಳಿಸಿಕೊಂಡು ಬದುಕುವುದೇ ಈಗ ದೊಡ್ಡ ಸವಾಲಾಗಿದೆ. ಬದುಕನ್ನು ಗೆಲ್ಲುತ್ತೇನೆ ಎಂಬ ನಂಬಿಕೆ ಇರಲಿ. ನಮಗೆ ಯಾರು ಮಾಡೆಲ್ ಎಂದು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ನಮ್ಮ ಹವ್ಯಾಸಗಳು ನಮ್ಮನ್ನು ಹಾಳು ಮಾಡುವ ಅಸ್ತ್ರಗಳಾಗುವುದು ಬೇಡ. ಪುಸ್ತಕಗಳು ನಮ್ಮ ಒಳ್ಳೆಯ ಗೆಳೆಯರು ಎಂಬುದನ್ನು ಅರಿಯಬೇಕು. ನಾವು ಯಾರನ್ನೂ ಸಣ್ಣವರನ್ನಾಗಿಸುವುದು ಬೇಡ. ನಾವು ದೊಡ್ಡವರಾಗಬೇಕು. ಮುಖವಾಡದ ಬದುಕಿನಿಂದ ಹೊರ ಬಂದು ಮುಕ್ತ ಮನಸ್ಸಿನಿಂದ ಮುನ್ನಡೆಯಬೇಕು. ಒಳ್ಳೆಯ ಅಭಿರುಚಿಗಳು ನಮ್ಮದಾದರೆ ಜೀವನ ರುಚಿಯಾಗಿರುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಜಿ.ಆರ್. ಸಿಂಧೆ, ಒಬ್ಬರಿಗೊಬ್ಬರು ಗೌರವಿಸುವ ಸಂಸ್ಕೃತಿ ನಮ್ಮದು. ಕಾಲೇಜು ಜೀವನಕ್ಕೆ ಬಂದು ಹೊಸ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಬೇಕು. ಇಲ್ಲಿರುವ ಒಳ್ಳೆಯದನ್ನೆಲ್ಲ ಪಡೆದುಕೊಳ್ಳುವ ಇಚ್ಛಾಶಕ್ತಿ ಮಾತ್ರ ವಿದ್ಯಾರ್ಥಿಯಲ್ಲಿರಬೇಕು. ಕೀಳರಿಮೆ ಬಿಟ್ಟು ಓದಿನಲ್ಲಿ ಮಗ್ನರಾಗಿ ಎಂದು ಕರೆ ನೀಡಿದರು.
ಪ್ರತಿಭಾ ಪುರಸ್ಕಾರ: ನೀಟ್ ಪರೀಕ್ಷೆಯಲ್ಲಿ ಸಾಧನೆ ತೋರಿದ ಐಶ್ವರ್ಯ ತಳವಾರ, ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಸಂತೋಷ ಡಿಳ್ಳೆಪ್ಪನವರ, ಧನುಶ್ರೀ ಬೆಟಗೇರಿ, ಅಮೃತಾ ಮುಲ್ಕಿ, ನಾಗರಾಜ ಹೊಟ್ಟೂರ, ಗೌಸಿಯಾಬಾನು ಧಾನೆಬಾಗ, ಸಹನಾ ನರೇಗಲ್ಲ, ರಕ್ಷಿತಾ ಹಬೀಬ, ಅಜಗರಲಿ ದುಕಾನದಾರ ಅವರನ್ನು ಸನ್ಮಾನಿಸಲಾಯಿತು.ಆರ್.ಎಸ್. ರಾಯಕರ, ಸಿ.ಎಫ್. ಬಾಳೇಶ್ವರಮಠ, ಎಂ.ಎಸ್. ಬೆಂಡೀಗೇರಿ, ಎಂ.ವಿ. ಸಾತೇನಹಳ್ಳಿ, ಅನಿತಾ ಉಗರಗೋಳ, ಬಿ.ಆರ್. ಪಾಟೀಲ, ಬಸವರಾಜ ಹೊಂಗಲ, ವಿಶ್ವ ಬಳಲಕೊಪ್ಪ, ಶಿವರಾಜ ಮಂಟೂರ, ಕಾವ್ಯ ತಿಳವಳ್ಳಿ ಇತರರು ಇದ್ದರು.
ಸಮಷ್ಠಿ-ಧನ್ಯಾ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಎನ್.ಎ. ಗಾಣಿಗಿ ಸ್ವಾಗತಿಸಿದರು. ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿಮಠ ಪರಿಚಯಿಸಿದರು. ಪ್ರೊ. ಅವಿಕ್ಷಾರಶ್ಮಿ ಸವಣೂರ, ಪ್ರೊ. ಪಿ. ಕೆ. ಬಸವರಾಜೇಶ್ವರಿ ನಿರೂಪಿಸಿದರು. ಪ್ರೊ. ಗಿರೀಶ ಹೊಸಳ್ಳಿ ವಂದಿಸಿದರು.