ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರಾಜಕೀಯ ವಿದ್ಯಮಾನಗಳು, ಅಭಿವೃದ್ಧಿ ಕಾರ್ಯ, ಕೊಡಗಿನ ಸಮಸ್ಯೆಗಳು, ಜನರಲ್ಲಿರುವ ಗೊಂದಲಗಳು ಹೀಗೆ ನಾನಾ ವಿಷಯಗಳ ಬಗ್ಗೆ ಸಂವಾದದಲ್ಲಿ ಬೆಳಕು ಚೆಲ್ಲಲಾಯಿತು. ಸಚಿವ ಸ್ಥಾನದಿಂದ ವಂಚಿತಗೊಂಡ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು, ಹಲವು ವರ್ಷಗಳ ಹಿಂದೆ ಕೊಡಗಿನ ಮೂವರು ಸಚಿವರಾಗಿದ್ದರು. ನಂತರ ದೀರ್ಘಾವಧಿಗೆ ಸಚಿವ ಭಾಗ್ಯ ಜಿಲ್ಲೆಗೆ ದೊರೆತ್ತಿಲ್ಲ. ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಆಡಗಿದೆ. ಹಲವು ಕ್ಷೇತ್ರಗಳನ್ನೊಳಗಂಡ ಜಿಲ್ಲೆ, ಜಾತಿ ಪ್ರಾತಿನಿಧ್ಯ ಹೀಗೆ ನಾನಾ ವಿಷಯದಡಿ ಸಚಿವ ಸ್ಥಾನ ನಿರ್ಧಾರವಾಗುತ್ತದೆ. ಈ ನಡುವೆ ತನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿತ್ತು. ಇದಕ್ಕಾಗಿ 2 ಶರ್ಟ್ ಗಳನ್ನು ಕೂಡ ಆಯ್ಕೆ ಮಾಡಿಟ್ಟುಕೊಂಡಿದ್ದೆ. ಕೆಲವೇ ಕ್ಷಣಗಳಲ್ಲಿ ಸಚಿವ ಸ್ಥಾನ ಕೈತಪ್ಪಿದ ವಿಚಾರ ತಿಳಿದುಬಂತು. ಆದರೆ ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಆಶ್ಚರ್ಯ ಮೂಡಿಸಿತು. ಇದೊಂದು ಸಂವಿಧಾನಾತ್ಮಕ, ಗೌರವಾನ್ವಿತ ಹಾಗೂ ದೊಡ್ಡ ಜವಾಬ್ದಾರಿ ಹೊಂದಿರುವ ಹುದ್ದೆಯಾಗಿದೆ. ಆದರೆ, ಈ ಹುದ್ದೆಯಲ್ಲಿದ್ದರೆ ಕೆಲವೊಂದು ಪರಿಮಿತಿಗೊಳಪಟ್ಟಿರಬೇಕಾಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನನ್ನನ್ನು ಕಾನೂನು ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದರು. ನನ್ನನ್ನು ರಾಜಕೀಯವಾಗಿ ಬಳಸಿಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ತನ್ನ ಹೆಸರನ್ನು ಪರಿಗಣಿಸಿದ್ದೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಜನರ ಹಿತಾಸಕ್ತಿ ಸರ್ಕಾರದ ಕರ್ತವ್ಯ: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ಹಲವು ಬಾರಿ ತಿರಸ್ಕರಿಸಿದ್ದು, ಇದೀಗ ಮತ್ತೊಮ್ಮೆ ಕರಡು ಅಧಿಸೂಚನೆಯನ್ನು ತಿರಸ್ಕಾರ ಮಾಡಿದೆ. ಕೊಡಗಿನ ಗ್ರಾಮಗಳನ್ನು ಸೇರಿಸಿರುವುದು ಸಹಜವಾಗಿ ಆತಂಕ ಮೂಡಿಸುತ್ತದೆ. ಪರಿಸರ ಸಂರಕ್ಷಣೆಯೊಂದಿಗೆ ಜನರ ಹಿತಾಸಕ್ತಿ ಕಾಪಾಡುವುದು ಕೂಡ ಸರ್ಕಾರದ ಕರ್ತವ್ಯವಾಗಿದೆ ಎಂದು ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.ಪರಿಸರ ಹಾಗೂ ಪಶ್ಚಿಮಘಟ್ಟ ಖಂಡಿತವಾಗಿಯೂ ಸಂರಕ್ಷಣೆಯಾಗಲೇ ಬೇಕು. ಇದು ರಕ್ಷಣೆಯಾದರೆ ಮಾತ್ರ ದೇಶ ಉಳಿಯುತ್ತದೆ. ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ. ಈ ವಿಷಯದಲ್ಲಿ ಪರ-ವಿರೋಧದೊಂದಿಗೆ ವಾಸ್ತವಾಂಶವನ್ನು ತಿಳಿದುಕೊಳ್ಳಬೇಕಾಗಿದೆ. ವರದಿ ಜಾರಿಯಿಂದ ಗ್ರಾಮೀಣ ಭಾಗದ ಜನಜೀವನ, ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಅನೇಕ ಕಡಿವಾಣಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕರಡು ಅಧಿಸೂಚನೆಯನ್ನು ಒಪ್ಪಲಾಗುವುದಿಲ್ಲ. ಕೇಂದ್ರ ಸರಕಾರ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಯಾವುದಕ್ಕೆ ನಿರ್ಬಂಧ ಹೇರಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಿ. ಗಣಿಗಾರಿಕೆ, ಕೋರೆ, ಐಷಾರಾಮಿ ರೆಸಾರ್ಟ್ ಗಳನ್ನು ಬಂದ್ ಮಾಡದರೆ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದ ಅವರು, ಕೃಷಿ ಚಟುವಟಿಕೆ ಸಂಬಂಧ ಬಾವಿ ನಿರ್ಮಾಣ, ಮರ ಕಪಾತ್‌ನಂತಹ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದನ್ನು ಒಪ್ಪಲಾಗುವುದಿಲ್ಲ ಎಂದರು. ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ: ವನ್ಯಜೀವಿ-ಮಾನವ ಸಂಘರ್ಷವನ್ನು ತಡೆಯುವ ಕೆಲಸವಾಗುತ್ತಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆ. 28ಕ್ಕೆ ಅರಣ್ಯ ಸಚಿವರೇ ಜಿಲ್ಲೆಗೆ ಆಗಮಿಸಲಿದ್ದು, ಜನರು ಹಾಗೂ ಬಾಧಿತರೊಂದಿಗೆ ಸಮಾಲೋಚಿಸಲು ಮುಕ್ತ ಅವಕಾಶ ಕಲ್ಪಿಸಲಾಗುವುದು. ಸಭೆ ನಡೆಸಿ ಪರಿಹಾರದ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ಕಾಡಾನೆ ಕಾರ್ಯಾಚರಣೆ ಕೈಗೊಂಡು 2 ಆನೆಗಳನ್ನು ಸೆರೆಹಿಡಿಯಲಾಗಿದೆ. ಆದರೆ ಮತ್ತೆ ಅದನ್ನು ಕಾಡಿಗೆ ಬಿಟ್ಟರೆ ಮರಳಿ ತೋಟಗಳಿಗೆ ಲಗ್ಗೆ ಇಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವ್ಯವಸ್ಥಿತ ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಕೊಡಗಿನಲ್ಲಿ ದುಬಾರೆ ಮತ್ತು ಮತ್ತಿಗೋಡಿನಲ್ಲಿ ಮಾತ್ರ ಸಾಕಾನೆ ಶಿಬಿರಗಳಿದ್ದು, ಸೆರೆಯಾದ ಆನೆಯನ್ನು ದುಬಾರೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿರುವ ಕ್ರಾಲ್ ಗಳ ಸಂಖ್ಯೆ ಹೆಚ್ಚಾಗಬೇಕು. ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಲ್ಲದೆ ಈ ಹಿಂದಿನ ಅರಣ್ಯ ಸಚಿವರು ಕಾಡಾನೆಯನ್ನು ಸಾಫ್ಟ್ ಲಾಂಚ್ ಮಾಡುವ ಸಂಬಂಧ ಯೋಜನೆ ರೂಪಿಸಿದ್ದರು. ಅದು ಲಾಭದಾಯಕವಾಗಿದ್ದರೆ ಯೋಜನೆ ಅನುಷ್ಠಾನಕ್ಕೂ ಪ್ರಯತ್ನಿಸಲಾಗುವುದು. ರೈಲ್ವೆ ಬ್ಯಾರಿಕೇಡ್, ಕಂದಕ, ಸೋಲಾರ್ ಬೇಲಿ ಸೇರಿದಂತೆ ಹಂತ ಹಂತವಾಗಿ ಕಾರ್ಯಕ್ರಮ ಹಮ್ಮಿಕೊಂಡು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಕಾಡಾನೆ ಕಡಿಮೆ ಇರುವ ರಾಜ್ಯಗಳಿಗೂ ಅನೆಗಳನ್ನು ಹಸ್ತಾಂತರಿಸಬಹುದಾಗಿದೆ ಎಂದ ಅವರು, ಉಸ್ತುವಾರಿ ಸಚಿವರ ಮೂಲಕ ಮಾಜಿ ಶಾಸಕರಿಗೆ ಸಭೆಗೆ ಆಹ್ವಾನ ನೀಡಲಾಗುವುದು ಎಂದರು.
ಪ್ರಾಜೆಕ್ಟ್ ಎಲಿಫೆಂಟ್ ಯೋಜನೆ ಇದ್ದು, ಅದರ ಮೂಲಕ ಒಂದು ರು. ಅನುದಾನವೂ ಬಂದಿಲ್ಲ. ಇಂತಹ ವಿಚಾರದಲ್ಲಿ ಪಕ್ಷಾತೀತವಾಗಿ ಕೈಜೋಡಿಸಿ ಪರಿಹಾರೋಪಾಯಕ್ಕೆ ಬೆಂಬಲ ನೀಡಬೇಕು. ಪ್ರತಿಭಟನೆ ಮಾಡುವ ಬದಲು ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಪ್ರತಿಪಕ್ಷ ಬಿಜೆಪಿ ಪ್ರಯತ್ನಿಸಬೇಕೆಂದರು.ರಸ್ತೆ ಸುಧಾರಣೆ: ಕೊಡಗಿನ ರಸ್ತೆ ಮೊದಲಿಗಿಂತ ಸುಧಾರಿಸಿದ್ದು, ಕೆಲವೊಂದು ರಸ್ತೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು. ಭಾಗಮಂಡಲ ರಸ್ತೆ ಉತ್ತಮವಾಗಿ ನಿರ್ಮಾಣವಾಗಿದ್ದು, ವೀರಾಜಪೇಟೆ-ಮಡಿಕೇರಿ ಹಾಗೂ ನಾಪೋಕ್ಲು ರಸ್ತೆ ದುರಸ್ತಿಗೆ ಟೆಂಡರ್ ಆಗಿದೆ. ವೀರಾಜಪೇಟೆ ರಸ್ತೆ ನಿರ್ಮಾಣಕ್ಕೆ 40 ಕೋಟಿ ರು. ಅನುದಾನವೂ ಬಿಡುಗಡೆಯಾಗಿದೆ. ಗ್ರಾಮೀಣ ರಸ್ತೆಗಳು ದುರಸ್ತಿಯಾಗುತ್ತಿವೆ ಎಂದರು.ವೀರಾಜಪೇಟೆ ಆಸ್ಪತ್ರೆ ಮೇಲ್ದರ್ಜೆಗೆ ಅನುಮೋದನೆಯಾಗಿದೆ. ವಿದ್ಯುತ್ ಜಾಲ ಬಲವರ್ಧನೆಗೊಳಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡಲಾಗುವುದು ಎಂದರು.
ಇದೇ ಸಂದರ್ಭ ಪೊನ್ನಣ್ಣ ಅವರನ್ನು ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಜೆ. ರಾಕೇಶ್ ಇದ್ದರು. ರಾಕೇಶ್ ಸ್ವಾಗತಿಸಿ, ಖಜಾಂಚಿ ಸುನಿಲ್ ಪೊನ್ನೇಟಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.