ಶಿಗ್ಗಾಂವಿ: ‘ಉಳುವವನೇ ಭೂ ಒಡೆಯ’ ಕಾಯ್ದೆ ಜಾರಿಗೊಳಿಸುವ ಮೂಲಕ ಭೂಮಿಯಿಲ್ಲದ ಕೃಷಿಕರಿಗೆ ಜಮೀನು ಒದಗಿಸಿ, ಅವರ ಬದುಕಿಗೆ ಹೊಸ ಭರವಸೆ ನೀಡಿದ ಮಹಾನ್ ನಾಯಕ ಡಿ. ದೇವರಾಜ ಅರಸು. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಆಶಯಗಳ ಮೂಲಕ ಅವರು ಮನುಕುಲದ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಎ.ಸಿ. ವಾಲಿ ಮಹಾರಾಜರು ಹೇಳಿದರು.
ಅರಸು ಅವರು ತಮ್ಮ ಆಡಳಿತಾವಧಿಯನ್ನು ಕೃಷಿಕರು, ಬಡ ಕೂಲಿಕಾರರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು. ಹಲವು ಸಮಸ್ಯೆ, ಸವಾಲುಗಳನ್ನು ಎದುರಿಸಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದರು. ತುಳಿತಕ್ಕೊಳಗಾದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರಿಗೆ ನ್ಯಾಯಯುತ ಹಕ್ಕುಗಳನ್ನು ದೊರಕಿಸಿಕೊಟ್ಟರು. ಇದರಿಂದಾಗಿ ಜನರು ಸ್ವಾಭಿಮಾನದಿಂದ ಬದುಕುವ ಕನಸು ಕಾಣುವಂತಾಯಿತು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳೋಂಕಿ ವಹಿಸಿ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಮಾಜದಲ್ಲಿ ಸಮಾನತೆಯ ಆಶಯವನ್ನು ಬಲಪಡಿಸಿದವರು ಅರಸು. ದುಡಿಯುವ ಕೈಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡಿದರು. ವಸತಿ ಶಾಲೆಗಳನ್ನು ಆರಂಭಿಸುವ ಮೂಲಕ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಮಹತ್ವದ ಕೊಡುಗೆ ನೀಡಿದರು ಎಂದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಇಂದೂಧರ ಮುತ್ತಳ್ಳಿ ಹಾಗೂ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ಶಶಿಕಾಂತ ರಾಠೋಡ ಉಪನ್ಯಾಸ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ, ಸತೀಶ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹೇಶ್ವರ ಕೇಸರಿ, ಮುಖಂಡರಾದ ಕರೆಪ್ಪ ಕಟ್ಟಿಮನಿ, ಫಕ್ಕೀರಪ್ಪ ಕುಂದೂರ, ಲಕ್ಷ್ಮಣ ಕುಂದಗೋಳ, ಕಾಳಪ್ಪ ಬಡಿಗೇರ, ನಿಲಯಪಾಲಕ ರಮೇಶ ಹರಿಜನ, ಸಂಗಪ್ಪ ಗುದಗಿ, ಬಿ.ಬಿ. ಕವಾಸ, ಓಲೇಕಾರ, ಸಣ್ಣಗೌಡ್ರ, ವಿಜಯಲಕ್ಷ್ಮೀ ಅಂಬಿಗೇರ, ಲಕ್ಷ್ಮಿ ನರಸಿಂಹ, ಕೊಟ್ರೇಶ ಎನ್.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.