ಹಾನಗಲ್ಲ: ಮನುಷ್ಯ ಧರ್ಮ ಪಾಲನೆಗೆ ನಮ್ಮ ಮನಸ್ಸು, ವಿವೇಕಗಳು ಸಜ್ಜಾಗಿ ಕಾರ್ಯಪ್ರವೃತ್ತವಾದರೆ, ಇಡೀ ಸಮುದಾಯದ ಹಿತಕ್ಕೆ ಶಕ್ತಿ ಬರುವಂತೆ ಬದುಕಲು ಸಾಧ್ಯವಾಗುತ್ತಿದ್ದು, ಸದ್ಗುಣಗಳೇ ನಮ್ಮ ಬದುಕಿನ ಧೀಶಕ್ತಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೇಂದ್ರ ಕಚೇರಿಯ ಜ್ಞಾನ ವಿಕಾಸ ವಿಭಾಗದ ನಿರ್ದೇಶಕ ದಿನೇಶ ಪೂಜಾರ ತಿಳಿಸಿದರು.
ಜಿಲ್ಲಾ ನಿರ್ದೇಶಕ ಅಶೋಕ ಮಾತನಾಡಿ, ಕಾಲ ಹರಣ ಬೇಡ. ಕಾಲವನ್ನು ದುಡಿಸಿಕೊಳ್ಳುವ, ಜೊತೆಯಾಗಿ ಯೋಜಿಸಿ ಯೋಚಿಸಿ ಕುಟುಂಬದ ಸೌಖ್ಯಕ್ಕೆ ಒಡ್ಡಿಕೊಳ್ಳುವ ಸದ್ಭಾವ ನಮ್ಮಲ್ಲಿರಲಿ. ದುಡಿದು ಶ್ರಮವಹಿಸಿ ಗಳಿಸಿದ ಹಣ ಸದುಪಯೋಗವಾಗಲಿ. ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಇಂದಿನ ತಂತ್ರಜ್ಞಾನವನ್ನು ಬಳಸಿ ಸದಸ್ಯರಿಗೆ ವಿಳಂಬವಿಲ್ಲದೆ ಹಣಕಾಸು ಸೌಲಭ್ಯ ನೀಡಲು ಮುಂದಾಗಿದೆ. ಇದೆಲ್ಲ ಸ್ವಸಹಾಯ ಸಂಘಗಳ ಪ್ರಾಮಾಣಿಕ ವಹಿವಾಟಿನ ಫಲ. ಪಾರದರ್ಶಕವಾದ ನಮ್ಮ ನಡುವಳಿಕೆಯೇ ನಮ್ಮೆಲ್ಲ ಬದುಕಿನ ಯಶಸ್ಸು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಮಾರುತಿ ಶಿಡ್ಲಾಪೂರ, ಹಬ್ಬಗಳು ನಾವು ದುಡಿದ ಹಣವನ್ನು ಪೋಲು ಮಾಡುವ ಕಾಲವಾಗುವುದು ಬೇಡ. ನಮ್ಮ ಶ್ರಮದ ಫಲ ನಮ್ಮ ನೆಮ್ಮದಿಗೆ ಸಾರ್ಥಕ ಬಳಕೆಯಾಗಲಿ. ದುಡಿದಿದ್ದನ್ನು ಬಳಸಿ ನಾಳೆಗಾಗಿ ಉಳಿಸಿ ನೆಮ್ಮದಿಯಿಂದ ಬದುಕೋಣ ಎಂದರು.ಕೇಂದ್ರ ಕಚೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಮಲ್ಲಿಕಾ ವೇದಿಕೆಯಲ್ಲಿದ್ದರು. ನಸರಿನ್‌ಬಾನು ಸುತಾರ ಅಧ್ಯಕ್ಷತೆವಹಿಸಿದ್ದರು. ಜ್ಞಾನವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಜ್ವಾಲಮ್ಮ ಸೋಮಣ್ಣನವರ, ಸೇವಾ ಪ್ರತಿನಿಧಿ ರಶ್ಮಿ ಹೆಬ್ಬಾರ ವೇದಿಕೆಯಲ್ಲಿದ್ದರು. ಮಂಜುಳಾ ಕಲಾಲ ಸ್ವಾಗತಿಸಿದರು, ಮೀರಜಬಾನು ಸುತಾರ ನಿರೂಪಿಸಿದರು.