ವೀರಶೈವ ಲಿಂಗಾಯತರಿಗೆ ಕನಿಷ್ಠ 4 ಸಚಿವ ಸ್ಥಾನ ಸಿಗುವ ವಿಶ್ವಾಸ: ರಂಭಾಪುರಿ ಶ್ರೀ

KannadaprabhaNewsNetwork |  
Published : Jul 22, 2026, 02:15 AM IST
ರಂಭಾಪುರಿ ಶ್ರೀ | Kannada Prabha

ಸಾರಾಂಶ

ವೀರಶೈವ, ಲಿಂಗಾಯತ ಧರ್ಮವನ್ನು ವಿಭಜಿಸುವ ಪ್ರಯತ್ನ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮಾಜವು ಸಾರಾಸಗಟಾಗಿ ತಿರಸ್ಕರಿಸಿತ್ತು. ಆಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ ತಪ್ಪಿನ ಕುರಿತು ಸಾರ್ವಜನಿಕವಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.

ಗದಗ: ರಾಜ್ಯ ಸಚಿವ ಸಂಪುಟದ 2ನೇ ಹಂತದ ವಿಸ್ತರಣೆಯಲ್ಲಿ ವೀರಶೈವ, ಲಿಂಗಾಯತ ಸಮುದಾಯಕ್ಕೆ ನಾಲ್ಕರಿಂದ ಐದು ಸಚಿವ ಸ್ಥಾನಗಳು ದೊರೆಯುವ ವಿಶ್ವಾಸವಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಮಂಗಳವಾರ ನಗರದಲ್ಲಿ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದರು. ಮೊದಲ ಹಂತದಲ್ಲಿ ಸಮಾಜದ ಮೂರು ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಜಾತಿ ಹಾಗೂ ಮಹಿಳಾ ಮೀಸಲಾತಿ ಸೇರಿದಂತೆ ವಿವಿಧ ಸಮೀಕರಣಗಳನ್ನು ಪರಿಗಣಿಸಿದರೂ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ, ಲಿಂಗಾಯತ ಸಮುದಾಯಕ್ಕೆ ಕನಿಷ್ಠ ನಾಲ್ಕು ಸಚಿವ ಸ್ಥಾನಗಳಾದರೂ ನೀಡುವುದು ನ್ಯಾಯಸಮ್ಮತವಾಗಲಿದೆ ಎಂದರು.

ವೀರಶೈವ, ಲಿಂಗಾಯತ ಧರ್ಮವನ್ನು ವಿಭಜಿಸುವ ಪ್ರಯತ್ನ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮಾಜವು ಸಾರಾಸಗಟಾಗಿ ತಿರಸ್ಕರಿಸಿತ್ತು. ಆಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ ತಪ್ಪಿನ ಕುರಿತು ಸಾರ್ವಜನಿಕವಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. ಲಕ್ಷ್ಮೇಶ್ವರದ ದಸರಾ ಕಾರ್ಯಕ್ರಮದಲ್ಲಿ ಇಂತಹ ತಪ್ಪು ಮತ್ತೆ ಮರುಕಳಿಸದಂತೆ ತಿದ್ದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಬಳಿಕ ನಡೆದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದನ್ನೂ ಅವರು ನೆನಪಿಸಿದರು.

ಡಿ.ಕೆ. ಶಿವಕುಮಾರ್ ಅವರು ಇಂತಹ ಪ್ರಮಾದಗಳನ್ನು ಮತ್ತೆ ಮಾಡುವವರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ಶ್ರೀಗಳು, ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಒಳಪಂಗಡಗಳಿದ್ದು, ಇದುವರೆಗೆ ರಾಜಕೀಯ ಪ್ರಾತಿನಿಧ್ಯ ಸಿಗದ ಸಮುದಾಯಗಳಿಗೆ ಈ ಬಾರಿ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ ಎಂದರು.

ರಂಭಾಪುರಿ ಪೀಠದೊಂದಿಗೆ ಡಿಕೆಶಿ ಆತ್ಮೀಯತೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಂಭಾಪುರಿ ಪೀಠದ ವೀರಗಂಗಾಧರ ಶಿವಾಚಾರ್ಯ ಶ್ರೀಗಳ ಮೇಲೆ ವಿಶೇಷ ಭಕ್ತಿ ಇರುವುದಕ್ಕೆ ಕಾರಣವನ್ನೂ ರಂಭಾಪುರಿ ಶ್ರೀಗಳು ವಿವರಿಸಿದರು.

ಡಿ.ಕೆ. ಶಿವಕುಮಾರ್ ಬಾಲ್ಯದಲ್ಲಿ ತಾಯಿಯಿಂದ ಗದರಿಸಲ್ಪಡುತ್ತಿದ್ದ ವೇಳೆ ಅಲ್ಲಿದ್ದ ವೀರಗಂಗಾಧರ ಶ್ರೀಗಳು, ಈ ಬಾಲಕನನ್ನು ಹೊಡೆಯಬೇಡಿ. ಮುಂದೆ ಈತ ದೊಡ್ಡ ಸ್ಥಾನವನ್ನು ಅಲಂಕರಿಸುತ್ತಾನೆ. ಹಠ ಮತ್ತು ಛಲದಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾನೆ ಎಂದು ಆಶೀರ್ವದಿಸಿದ್ದರಂತೆ.

ಅಂದಿನಿಂದಲೇ ಡಿ.ಕೆ. ಶಿವಕುಮಾರ್ ಅವರು ವೀರಗಂಗಾಧರ ಶ್ರೀಗಳ ಭಾವಚಿತ್ರಕ್ಕೆ ನಿತ್ಯ ಗೌರವ ಸಲ್ಲಿಸುತ್ತಿದ್ದು, ಯಾವುದೇ ಮಹತ್ವದ ಕಾರ್ಯ ಆರಂಭಿಸುವ ಮೊದಲು ಶ್ರೀಗಳನ್ನು ಸ್ಮರಿಸುವ ಪರಿಪಾಠವನ್ನು ಇಂದಿಗೂ ಮುಂದುವರಿಸಿಕೊಂಡಿದ್ದಾರೆ. ಜೀವನದಲ್ಲಿ ಎದುರಾದ ಸಂಕಷ್ಟದ ಸಂದರ್ಭಗಳಲ್ಲೂ ಶ್ರೀಗಳ ಆಶೀರ್ವಾದವೇ ತಮ್ಮ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ ಎಂಬ ನಂಬಿಕೆಯನ್ನು ಅವರು ಹೊಂದಿದ್ದಾರೆ. ಇದೇ ಕಾರಣಕ್ಕೆ ರಂಭಾಪುರಿ ಪೀಠದೊಂದಿಗೆ ಅವರಿಗೆ ವಿಶೇಷ ಆತ್ಮೀಯತೆ ಬೆಳೆದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪುಟದಲ್ಲಿ ಹೊಸಬರಿಗೆ ಅವಕಾಶ ಹೈಕಮಾಂಡ್‌ಗೆ ಬಿಟ್ಟದ್ದು: ಜಾರಕಿಹೊಳಿ
ರೈತರಲ್ಲಿ ಒಡಕು ಮೂಡಿಸುತ್ತಿರುವ ಸರ್ಕಾರ: ವೀರೇಶ ಸೊಬರದಮಠ