ದಾವಣಗೆರೆ: ನಗರದ ಶಾಬನೂರು ರಸ್ತೆಯಲ್ಲಿ ತಾಲೂಕಿನ ಜರೇಕಟ್ಟೆ ಗ್ರಾಮದ ಸಿ.ಜಗದೀಶ ಅವರಿಗೆ ದ್ವಿಚಕ್ರ ವಾಹನಗಳಲ್ಲಿ ಬಂದು ಮನಸೋ ಇಚ್ಛೆ ಕೈ-ಕಾಲುಗಳಿಂದ ಹಲ್ಲೆ ಮಾಡಿ, ₹4,300 ನಗದು, ಕೊರಳಲ್ಲಿದ್ದ 25 ಗ್ರಾಂ ಚಿನ್ನದ ಸರ ಸುಲಿಗೆ ಮಾಡಿದ್ದ ಐವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿ ಪರಮೇಶ್ವರ ಹೆಗಡೆ, ನಗರ ಡಿವೈಎಸ್‌ಪಿ ಬಿ.ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ತನಿಖೆಗೆ ಬಡಾವಣೆ ಠಾಣೆ ಇನ್‌ಸ್ಪೆಕ್ಟರ್ ಮಲ್ಲಮ್ಮ ಆರ್. ಚೌಬೆ ನೇತೃತ್ವದ ಅಧಿಕಾರಿ-ಸಿಬ್ಬಂದಿ ತಂಡ ರಚಿಸಲಾಗಿತ್ತು. ತಂಡವು ಆರೋಪಿಗಳಿಂದ ₹2,400 ನಗದು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ ಜಪ್ತಿ ಮಾಡಿದೆ. ಆರೋಪಿತ ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದು, ಐವರನ್ನೂ ಸರ್ಕಾರಿ ಬಾಲಕರ ವೀಕ್ಷಣಾಲಯದಲ್ಲಿರಿಸಲು ಮಂಡಳಿ ಆದೇಶಿಸಿದೆ. ಪ್ರಕರಣದ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಪಿಎಸ್‌ಐ ಲತಾ ವಿ. ತಾಳೇಕರ್, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿ ದಾಸಪ್ಪರ ಬಸವರಾಜ, ದಿದ್ದಿಗೆ ಬಸವರಾಜ, ಧೃವ, ಕೆ.ಬಿ.ಹರೀಶ ಅವರ ತಂಡಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.- - -
(ಸಾಂದರ್ಭಿಕ ಚಿತ್ರ)