ಕನ್ನಡಪ್ರಭ ವಾರ್ತೆ ಹುಣಸೂರು
ಮನುಷ್ಯನ ಆಲೋಚನಾ ಕ್ರಮವು ಏಕಮುಖವಾಗಿ ಇರುವುದರಿಂದ ಮನುಷ್ಯ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಪಿ. ಪ್ರಸನ್ನ ತಿಳಿಸಿದರು.ರೋಟರಿ ಶಾಲೆಯಲ್ಲಿ ಮಂಗಳವಾರ ಕನ್ನಡಪ್ರಭ ದಿನಪತ್ರಿಕೆಯು ಅರಣ್ಯ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ವನ್ಯಜೀವಿ ಮತ್ತು ಅರಣ್ಯ ವಿಷಯ ಕುರಿತು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವಾಗಲೂ ನಮ್ಮ ಆಲೋಚನಾ ಕ್ರಮವು ಏಕಮುಖವಾಗಿ ಇರುತ್ತದೆ. ಪ್ರಾಣಿಯೊಂದಕ್ಕೆ ಅಥವಾ ಮರಗಳಿಗೆ ಡಿಕ್ಕಿ ಹೊಡೆದು ಅಪಘಾತವಾದಾಗಲೂ ನಮ್ಮ ವಾಹನಗಳಿಗೆ ಏನಾಯಿತು ಎಂದು ನೋಡುತ್ತೇವೆಯೇ ಹೊರತು ಪ್ರಾಣಿಗಳಿಗೆ ಏನಾಯಿತು, ಮರ- ಗಿಡಗಳಿಗೆ ಏನಾಯಿತು ಎಂದು ನೋಡುವುದಿಲ್ಲ ಎಂದರು.ಹೀಗೆ ಮನುಷ್ಯ ಸ್ವಾರ್ಥವಾಗಿ ಯೋಚಿಸುತ್ತಿರುವುದರಿಂದ ಅನೇಕ ಸಮಸ್ಯೆ ಉಂಟಾಗುತ್ತಿದೆ. ನಾವು ಪ್ರಾಣಿಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕು. ನಮ್ಮಂತೆಯೇ ಇತರ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಮನುಷ್ಯ ಮತ್ತು ವನ್ಯಜೀವಿ ಸಂಘರ್ಷವು ಹೆಚ್ಚಾಗಿ ಇತ್ತೀಚೆಗೆ ಹುಣಸೂರು ಭಾಗದಲ್ಲಿಯೂ ಹುಲಿ ಮತ್ತು ಚಿರತೆ ದಾಳಿ ಆಗುತ್ತಿದ್ದು, ಲಕ್ಷ್ಮಣತೀರ್ಥ ನದಿ ಅಂಚಿನಲ್ಲಿಯೂ ಚಿರತೆ ಚಲನವಲನ ಪತ್ತೆಯಾಗಿದೆ. ಆದ್ದರಿಂದ ನಾವು ವನ್ಯಜೀವಿಗಳು ಮತ್ತು ಅವುಗಳ ಉಳಿವಿನ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದರು.ರೋಟರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿ, ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದಿಲ್ಲ. ಪ್ರಾಣಿಗಳಿಗೆ ಮತದಾನದ ಹಕ್ಕಿದ್ದರೆ ನಮ್ಮ ಜನಪ್ರತಿನಿಧಿಗಳು ಅವುಗಳ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ಈಗ ನಮ್ಮ ಕನ್ನಡಪ್ರಭ ದಿನಪತ್ರಿಕೆಯು ಮಕ್ಕಳಲ್ಲಿ ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಭಾಗವಾಗಿ ಇಂತಹ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಸದಾ ಕಾಲ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದು. ಅದರಂತೆ ಕನ್ನಡಪ್ರಭ ಜತೆಗೂ ಕೈ ಜೋಡಿಸಿದೆ.ಇಸಿಒ ಸುನಿಲ್ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂದು ಹೇಳುತ್ತಾರೆ. ಹಾಗೆ ತಾವು ಬಿಡಿಸುವ ಚಿತ್ರವು ಕೇವಲ ಚಿತ್ರವಾಗಿರದೆ ವನ್ಯಜೀವಿಗಳು ಮತ್ತು ಅವುಗಳ ಸಂರಕ್ಷಣೆಯ ಭಾಗವಾಗಿರಲಿ ಎಂದು ಆಶಿಸಿದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಶಾಮಣ್ಣ ಧರ್ಮಾಪುರ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕನ್ನಡಪ್ರಭ ಹಿರಿಯ ಉಪ ಸಂಪಾದಕ ಮಹೇಂದ್ರ ದೇವನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುನಿಲ್, ಶಾಲೆಯ ಮುಖ್ಯ ಶಿಕ್ಷಕಿ ಎಲ್. ದೀಪಾ ಇದ್ದರು.ಸಹ ಶಿಕ್ಷಕಿ ಎ. ಶ್ರುತಿ ಪ್ರಾರ್ಥಿಸಿದರು. ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಿ.ಎನ್. ಹರೀಶ್ ನಿರೂಪಿಸಿದರು. ಸಹ ಶಿಕ್ಷಕ ಎಚ್.ಎಂ. ಲೋಕೇಶ್ ಸ್ವಾಗತಿಸಿದರು.
ಶಿಕ್ಷಕಿ ಶರ್ಮಿಳಾ ಚಿತ್ರಕಲಾ ಶಿಬಿರ ನಡೆಸಿಕೊಟ್ಟರು.ಬಹುಮಾನ ವಿತರಣೆ:
8ನೇ ತರಗತಿ ವಿಭಾಗದಲ್ಲಿ ಶಬನಂ- ಪ್ರಥಮ, ಓಂಕಾರ್- ದ್ವಿತೀಯ ಮತ್ತು ಕೆ.ಜಿ. ಕುಶಲ- ತೃತೀಯ. 9ನೇ ತರಗತಿ ವಿಭಾಗದಲ್ಲಿ ಯುವರಾಜ್ ಸಿಂಗ್- ಪ್ರಥಮ, ರಿತುಶ್ರೀ - ದ್ವಿತೀಯ ಮತ್ತು ಸಾರಥಿ- ತೃತೀಯ ಬಹುಮಾನ ಪಡೆದಿದ್ದಾರೆ.10ನೇ ತರಗತಿ ವಿಭಾಗದಲ್ಲಿ ಎನ್.ಬಿ. ಜಯಲಕ್ಷ್ಮೀ - ಪ್ರಥಮ, ಎಸ್. ರಾಹಿನ್ - ದ್ವಿತೀಯ ಮತ್ತು ಸ್ವಪ್ನ- ತೃತೀಯ ಸ್ಥಾನ ಪಡೆದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಶಾಮಣ್ಣ, ರೋಟರಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಹುಣಸೂರು ಸರ್ಕಾರಿ ಪ್ರೌಢಶಾಲೆಯ ವೀಣಾ ಕಾರ್ಯ ನಿರ್ವಹಿಸಿದರು.