೨೬ ವರ್ಷ ಸೈನಿಕ ಸೇವೆ ಮಾಡಿ ನಿವೃತ್ತಿಯಾಗಿರುವ ಕೃಷ್ಣ ದ್ಯಾವ ನಾಯ್ಕ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಾಲೂಕಿನ ಹೊಸೂರು ಗ್ರಾಮದ ಅರಣ್ಯ ಸ.ನಂ. ೨೧೦ರಲ್ಲಿ ಅನಾದಿಕಾಲದಿಂದ ಸಾಗುವಳಿ ಮಾಡುತ್ತಿದ್ದ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
೨೬ ವರ್ಷ ಸೈನಿಕ ಸೇವೆ ಮಾಡಿ ನಿವೃತ್ತಿಯಾಗಿರುವ ಕೃಷ್ಣ ದ್ಯಾವ ನಾಯ್ಕ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಾಲೂಕಿನ ಹೊಸೂರು ಗ್ರಾಮದ ಅರಣ್ಯ ಸ.ನಂ. ೨೧೦ರಲ್ಲಿ ಅನಾದಿಕಾಲದಿಂದ ಸಾಗುವಳಿ ಮಾಡುತ್ತಿದ್ದ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಸ್ಥಳ ಪರಿಶೀಲನಾ ಸಮಿತಿ ಜಿಪಿಎಸ್ ನಕಾಶೆಗೆ ಇದೇ ಸರ್ವೆ ನಂಬರ್‌ದಲ್ಲಿ ಸಾಗುವಳಿ ಕ್ಷೇತ್ರ ಗುರುತಿಸಲಾಗಿದೆ. ಇದೇ ಸಾಗುವಳಿ ಮಾಡಿದ ಕ್ಷೇತ್ರ ಸ.ನಂ. ೨೧೦ ನಮೂದಾಗಿರುವ ಜಿಪಿಎಸ್ ನಕಾಶೆಗೆ ವಲಯ ಅರಣ್ಯ ಅಧಿಕಾರಿ, ಉಪ ವಲಯ ಅಧಿಕಾರಿ, ಕಂದಾಯ ಇಲಾಖೆ, ಗ್ರಾಮ ಅರಣ್ಯ ಹಕ್ಕು ಸಮಿತಿ ಸಹಿ ಹಾಕಿದ್ದು ಇರುತ್ತದೆ. ಆದರೆ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರ ಇವರು ಜು. ೧೭ರಂದು ಮಾಡಿದ ಆದೇಶದಲ್ಲಿ ಹೊಸೂರು ಗ್ರಾಮದ ಸ.ನಂ. ೧೫೧ ಎಂದು ಒಕ್ಕಲೆಬ್ಬಿಸಲು ಗುರುತಿಸಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಪಾದಿಸಿದ್ದಾರೆ.
ಅರಣ್ಯವಾಸಿಯ ಅರ್ಜಿಗೆ ಅರಣ್ಯ ಇಲಾಖೆಯ ಜಿಪಿಎಸ್ ಸರ್ವೆ ಹಾಗೂ ಪ್ರಸ್ತುತ ಭೂ ಮಾಪನಾ ಕಂದಾಯ ಇಲಾಖೆಯ ದಿಶಾಂಕ ನಕಾಶೆಯಲ್ಲಿ ಅತಿಕ್ರಮಣ ಕ್ಷೇತ್ರ ಗುರುತಿಸಿದ ಕ್ಷೇತ್ರವು, ಆದೇಶ ಕ್ಷೇತ್ರಕ್ಕೆ ವ್ಯತ್ಯಾಸ ಇರುವುದರಿಂದ, ಒಕ್ಕಲೆಬ್ಬಿಸುವ ಕ್ಷೇತ್ರ ತಪ್ಪಾಗಿ ಗುರುತಿಸುವಿಕೆಯ ಗೊಂದಲದಿಂದ ತಾಲೂಕಿನ ನಿವೃತ್ತ ಸೈನಿಕನ ಕುಟುಂಬ ಆತಂಕಕ್ಕೆ ಒಳಗಾಗಿದೆ. ಈ ಹಿನ್ನೆಲೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ಒಕ್ಕಲೆಬ್ಬಿಸುವ ಆದೇಶಕ್ಕೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು ಹಾಗೂ ಒಕ್ಕಲೆಬ್ಬಿಸಲು ರಕ್ಷಣೆಗೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ನಿರ್ದೇಶನ ನೀಡಬಾರದೆಂದು ತಿಳಿಸಿದ್ದಾರೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯವಾಸಿಯ ಸಾಗುವಳಿ ಕ್ಷೇತ್ರ ಧೃಡಪಡಿಸಿಕೊಳ್ಳದೇ ಅರಣ್ಯ ಹಕ್ಕು ಕಾಯಿದೆಯ ಅರ್ಜಿಯಲ್ಲಿ ಸಲ್ಲಿಸಿದ ದಾಖಲೆ ಪರಿಶೀಲಿಸದೇ, ಜಿಪಿಎಸ್ ಮೇಲ್ಮನವಿ ದಾಖಲಿಸುವ ಕುರಿತು ಅರ್ಜಿ ಪರಿಶೀಲಿಸದೇ ,ರಾಜ್ಯ ಸರ್ಕಾರ ೧೯೧೫ರ ನಂತರ ದ ಅತಿಕ್ರಮಣ ಕ್ಷೇತ್ರ ಒಕ್ಕಲೆಬಿಸದಂತೆ ನೀಡಿದ ಆದೇಶ ಅನುಸರಿಸದೇ ಒಕ್ಕಲೆಬ್ಬಿಸುವ ಆದೇಶ ಮಾಡಿರುವುದು ಮೇಲ್ನೋಟಕ್ಕೆ ಕಾನೂನು ಬಾಹಿರವೆಂದು ಕಂಡು ಬರುವುದರಿಂದ ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದಲ್ಲಿ ತೀವ್ರ ತರದ ಹೋರಾಟ ಅನಿವಾರ್ಯವೆಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.