ಈ ವರ್ಷದ ಚಾತುರ್ಮಾಸ್ಯವನ್ನು ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ಎಂದು ವಿಶೇಷವಾಗಿ ಆಚರಿಸುವ ಐತಿಹಾಸಿಕ ಸಂಕಲ್ಪವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಕೈಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಭಕ್ತಿಭಾವ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶದೊಂದಿಗೆ ನೆರವೇರಿತು.
ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ಉದ್ಘಾಟನೆಕನ್ನಡಪ್ರಭ ವಾರ್ತೆ ಹೊನ್ನಾವರ
ಈ ವರ್ಷದ ಚಾತುರ್ಮಾಸ್ಯವನ್ನು ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ಎಂದು ವಿಶೇಷವಾಗಿ ಆಚರಿಸುವ ಐತಿಹಾಸಿಕ ಸಂಕಲ್ಪವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಕೈಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಭಕ್ತಿಭಾವ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶದೊಂದಿಗೆ ನೆರವೇರಿತು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮಾರುತಿ ಗುರೂಜಿ, ಪ್ರಾಕೃತಿಕ ಸಂಪತ್ತು ನಮ್ಮೆಲ್ಲರ ಅಮೂಲ್ಯ ಆಸ್ತಿ. ಅವುಗಳನ್ನು ಉಳಿಸುವುದು, ಬೆಳೆಸುವುದು ಮತ್ತು ಮುಂದಿನ ಪೀಳಿಗೆಗೆ ಸಂರಕ್ಷಿಸಿ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಪರಿಸರ ರಕ್ಷಣೆಗೆ ವಿಶ್ವದ ಅನೇಕ ರಾಷ್ಟ್ರಗಳು ಆದ್ಯತೆ ನೀಡುತ್ತಿರುವಾಗ ನಮ್ಮ ದೇಶದಲ್ಲಿ 38 ವಿನಾಶಕಾರಿ ಯೋಜನೆಗಳನ್ನು ಏಕೆ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಈ ವಿಶೇಷ ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯದ ಅಂಗವಾಗಿ ಪ್ರತಿ ವಾರ ಪತ್ರಕರ್ತರು, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರ ಪ್ರೇಮಿಗಳು ಹಾಗೂ ನೂರಾರು ಸಂತರು ಒಂದಾಗಿ ಪರಿಸರ ಸಂರಕ್ಷಣೆಯ ಕುರಿತು ವಿಚಾರ ಸಂಕಿರಣ, ಚಿಂತನೆ ಮತ್ತು ಚರ್ಚೆಗಳನ್ನು ನಡೆಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.
ವ್ಯಾಸ ಪೂರ್ಣಿಮೆಯ ಮಹತ್ವ ವಿವರಿಸಿದ ಗುರೂಜಿ, ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ತಿಳಿಸಿ, ತಾಯಿ-ತಂದೆಯರಿಂದ ಆರಂಭವಾಗಿ ಗುರುಗಳು ಹಾಗೂ ಸಮಾಜದ ಅನೇಕ ಮಹನೀಯರು ಜ್ಞಾನದ ಬೆಳಕನ್ನು ನೀಡುತ್ತಾರೆ. ನಾವೆಲ್ಲರೂ ಜ್ಞಾನ ಪಿಪಾಸುಗಳಾಗಿ ಬದುಕನ್ನು ಸಾರ್ಥಕಗೊಳಿಸೋಣ ಎಂದು ಕರೆ ನೀಡಿದರು.
ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹ ಅಧ್ಯಕ್ಷ ಅಶೋಕ ಕುಮಾರ ಸಿಂಗ್,
ಹಿಮಾಲಯ ಕನ್ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆನಂದ ಅನು ಸಿಂಗ್, ಯುವ ಉದ್ಯಮಿ, ಉಡುಪಿ ವೈಟ್ ಲೋಟಸ್ ಹೋಟೆಲ್‌ನ ಸಿ.ಎಂ.ಡಿ. ಅಜಯ ಪುರುಷೋತ್ತಮ ಶೆಟ್ಟಿ, ಸುಬ್ರಹ್ಮಣ್ಯ ಸವೇದ ಸಂಸ್ಕೃತ ಪಾಠಶಾಲೆಯ ವಿಶ್ರಾಂತ ಪ್ರಾಚಾರ್ಯ ವಿ.ಜಿ. ಹೆಗಡೆ ಗುಡ್ಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ವಿಶ್ವನಾಥ ನಾಯಕ, ಮಂಜುನಾಥ ಹೆಗಡೆ ಹಾಗೂ ನಗರಬಸ್ತಿಕೇರಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಸುನೀತಾ ಹೆಗಡೆ ಮಾತನಾಡಿದರು.
ಜಿ. ಟಿ. ಹೆಗಡೆ ಸ್ವಾಗತಿಸಿದರು. ಮಂಜುನಾಥ ಗೌಡ ವಂದಿಸಿದರು. ಶೈಲೇಶ್ ಕುಮಟಾ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.