ಬೇಡ್ತಿ-ಅಘನಾಶಿನಿ ನದಿತಿರುವು, ಶರಾವತಿ ಭೂಗತ ಜಲವಿದ್ಯುತ್ ಯೋಜನೆಗೆ ವಿರೋಧಕನ್ನಡಪ್ರಭ ವಾರ್ತೆ ಶಿರಸಿ
ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆ ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಈ ಅಭಿಯಾನವು ಜು. 29ರಿಂದ ಸೆ.26ರವರೆಗೆ ನಡೆಯುವ ಚಾತುರ್ಮಾಸ್ಯದ ಅವಧಿಯಿಡೀ ನಡೆಯಲಿದ್ದು, ಮಠಕ್ಕೆ ಆಗಮಿಸುವ ಸಾವಿರಾರು ಶಿಷ್ಯ ಭಕ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವೈಯಕ್ತಿಕವಾಗಿ ಮನವಿ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಿದ್ದಾರೆ.
ಹಸಿರು ಸ್ವಾಮೀಜಿ ಎಂದೇ ಜನಮನದಲ್ಲಿ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಂಕಲ್ಪದಂತೆ, ಪ್ರಕೃತಿಯ ರಕ್ಷಣೆಯೇ ಪರಮ ಧರ್ಮ ಎಂಬ ಸಂದೇಶವನ್ನು ಸಮಾಜದೊಳಗೆ ಬಿತ್ತುವ ಉದ್ದೇಶದಿಂದ ಈ ಚಳವಳಿ ರೂಪುಗೊಂಡಿದೆ. ಆಧ್ಯಾತ್ಮಿಕ ಸಾಧನೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂಬ ಆಶಯದಲ್ಲಿ ಮಠವು ಭಕ್ತರನ್ನು ಜಾಗೃತಗೊಳಿಸುತ್ತಿದೆ.ಪಶ್ಚಿಮ ಘಟ್ಟ, ನದಿಗಳು, ಅರಣ್ಯ ಮತ್ತು ಜೀವವೈವಿಧ್ಯವನ್ನು ಉಳಿಸುವುದು ಇಂದಿನ ಪೀಳಿಗೆಯ ಹೊಣೆಗಾರಿಕೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ಶಾಶ್ವತ ಹಾನಿ ಉಂಟುಮಾಡುವ ಯೋಜನೆಗಳನ್ನು ಮರುಪರಿಶೀಲಿಸಬೇಕು. ಪರಿಸರ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಸುರಕ್ಷಿತ ಬದುಕು ಸಾಧ್ಯ ಎಂಬ ಸಂದೇಶವನ್ನು ಜನ ಜನಿತಗೊಳಿಸುವ ಉದ್ದೇಶದಿಂದಲೇ ಚಾತುರ್ಮಾಸ್ಯದ ಈ ಪತ್ರ ಚಳುವಳಿಯನ್ನು ಜನಾಂದೋಲನವಾಗಿ ರೂಪಿಸಲಾಗಿದೆ.
ಮಠದಲ್ಲಿ ಸಿದ್ಧಪಡಿಸಿರುವ ಮನವಿ ಪತ್ರದಲ್ಲಿ ಬೆಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳು ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆ, ದಟ್ಟ ಅರಣ್ಯ, ಜೀವವೈವಿಧ್ಯ ಹಾಗೂ ಕೃಷಿಭೂಮಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಇದು ಕೇವಲ ಪತ್ರ ಬರೆಯುವ ಕಾರ್ಯಕ್ರಮವಲ್ಲ, ಪ್ರಕೃತಿಯ ಪರವಾಗಿ ಜನರ ಧ್ವನಿಯನ್ನು ಸರ್ಕಾರದ ಕಿವಿಗೆ ತಲುಪಿಸುವ ನಿರಂತರ ಜನಾಂದೋಲನ. ನದಿ, ಅರಣ್ಯ ಮತ್ತು ಪಶ್ಚಿಮ ಘಟ್ಟವನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎನ್ನುತ್ತಾರೆ ಬೇಡ್ತಿ–ಅಘನಾಶಿನಿ ಕಣಿವೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರನದಿ ತಿರುವು ಯೋಜನೆ ಕುರಿತು ದಿನದಿಂದ ದಿನಕ್ಕೆ ಹೊಸ ಬೆಳವಣಿಗೆ ನಡೆಯುತ್ತಿವೆ. ನಮ್ಮ ವಿರೋಧವನ್ನು ಸರ್ಕಾರಕ್ಕೆ ನಿರಂತರವಾಗಿ ತಿಳಿಸುವ ಪ್ರಯತ್ನ ಇದು. ಇಲ್ಲಿನ ಮಾದರಿಯ ಪತ್ರವನ್ನಾಗಲಿ ಅಥವಾ ತಮ್ಮದೇ ಮಾತುಗಳಲ್ಲಿ ಮನವಿಯನ್ನಾಗಲಿ ಬರೆದು ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ತಿಳಿಸಿದ್ದಾರೆ.