ಕನ್ನಡಪ್ರಭ ವಾರ್ತೆ ಮಡಿಕೇರಿ
ಕಟ್ಟೆಮಾಡು ಗ್ರಾಮದ ಶ್ರೀಮಹಾಮೃತ್ಯುಂಜಯ ದೇವಾಲಯದ ವಸ್ತ್ರ ಸಂಹಿತೆ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಫೆ.10 ರವರೆಗೆ ಜಿಲ್ಲಾಧಿಕಾರಿ ಕಾಲಾವಕಾಶ ನೀಡಿದ್ದಾರೆ. ಅಷ್ಟರೊಳಗೆ ಕಟ್ಟೆಮಾಡು ಗ್ರಾಮಸ್ಥರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಶ್ರೀಮಹಾಮೃತ್ಯುಂಜಯ ದೇವಾಲಯ ಸಮಿತಿಯ ಅಧ್ಯಕ್ಷ ಶಶಿ ಜನಾರ್ದನ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯದಲ್ಲೇ ಗ್ರಾಮಸ್ಥರ ಸಭೆಯ ದಿನಾಂಕ ತಿಳಿಸಲಾಗುವುದು, ಈ ಸಭೆಯ ಮೂಲಕ ಭಿನ್ನಾಭಿಪ್ರಾಯಗಳು ಸುಖಾಂತ್ಯಗೊಳ್ಳಲಿದೆ ಎನ್ನುವ
ವಿಶ್ವಾಸವಿದೆ ಎಂದರು.ಸಭೆಯಲ್ಲಿ ಸಂಗ್ರಹಿಸಲಾಗುವ ಅಭಿಪ್ರಾಯದ ವರದಿಯನ್ನು ಜಿಲ್ಲಾಧಿಕಾರಿಗೆ ಫೆ.10 ನೀಡಲಾಗುವುದು ಎಂದರು. ಈ ಹಿಂದೆ ವಿರಾಜಪೇ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸಮಿತಿ ಭೇಟಿ ಮಾಡಿದ ಸಂದರ್ಭ ಜಿಲ್ಲಾಡಳಿತದ ಬಳಿ ಕಾಲಾವಕಾಶ ಕೋರುವಂತೆ ಅವರು ಸಲಹೆ ನೀಡಿದ್ದರು. ಅದರಂತೆ ನಾವು
ಕಾಲಾವಕಾಶ ಕೋರಿಕೊಂಡೆವು ಎಂದು ತಿಳಿಸಿದರು.ನಿಯಮಾನುಸಾರ ಬೈಲಾ ರಚನೆ:
ನೋಂದಣಿಯಾಗಿರುವ ದೇವಾಲಯ ಸಮಿತಿಯ ಬೈಲಾದಲ್ಲಿ ಯಾವುದೇ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಡಲು ಮತ್ತು ಕಟ್ಟುಪಾಡು ಆಚರಿಸಲು ಅವಕಾಶವಿಲ್ಲ, ದೇವಾಲಯಕ್ಕೆ ಬರುವ ಭಕ್ತರೆಲ್ಲರೂ ಒಂದೇ ಎಂದು ತಿಳಿಸಲಾಗಿದೆ. ಸಂವಿಧಾನದ ನೀತಿ ನಿಯಮಗಳಿಗನುಸಾರವಾಗಿ ಬೈಲಾ ರಚಿಸಲಾಗಿದೆ. ಕಟ್ಟೆಮಾಡು ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ನೆಲೆಸಿದ್ದಾರೆ, ಗ್ರಾಮದ ನಾಲ್ಕು ಪೈಸಾರಿಯಲ್ಲಿ ಹಿಂದುಳಿದವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೇ ದೇವಸ್ಥಾನದ ಸಂಪೂರ್ಣ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ದೇವಾಲಯಕ್ಕಾಗಿ ದುಂಡಿಯುವ ಮಂದಿ ದುಡಿಮೆಗೆ ಮಾತ್ರ ಸೀಮಿತವಾಗಬಾರದು, ದೇವಾಲಯದಲ್ಲೂ ಇವರಿಗೆ ಸಮಾನ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಎಲ್ಲರೂ ಒಂದೇ ರೀತಿಯ ವಸ್ತ್ರವನ್ನು ಧರಿಸಿಕೊಂಡು ಬರುವಂತೆ ಬೈಲಾದಲ್ಲಿ ಸೂಚಿಸಲಾಗಿದೆ ಎಂದರು.ಶೋಷಿತ ವರ್ಗಕ್ಕೆ ಪ್ರಾರ್ಥನೆಗೆ ತೊಂದರೆಯಾಗಬಾರದು ಎನ್ನುವುದು ಸಮಿತಿಯ ಉದ್ದೇಶವಾಗಿದೆ. ಇದು ಹೊಸ ದೇವಾಲಯವಾಗಿದ್ದು, ಹೊಸ ಬೈಲಾ ರಚಿಸಲಾಗಿದೆ. ಅಷ್ಟಮಂಗಲ ಪ್ರಶ್ನೆಯ ಮೂಲಕವೇ ಎಲ್ಲರೂ ಒಗ್ಗೂಡಿ ಪುರಾತನ ದೇವಾಲಯವನ್ನು ದೇವಾಲಯವನ್ನು ನಿರ್ಮಿಸಿದ್ದೇವೆ ಮತ್ತು ದೇವಾಲಯಕ್ಕೆ ಹೆಸರು ಇಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಡಿ.27 ರಂದು ಗೊಂದಲ ಸೃಷ್ಟಿಯಾಗಿ ದೇವರ ಜಳಕ ಆಚರಣೆಗಳು ಪೊಲೀಸರ ಭದ್ರತೆಯಲ್ಲಿ ನಡೆಯಿತು.ಸುಮಾರು ಎರಡೂವರೆ ಸಾವಿರ ಭಕ್ತರು ಸಂಭ್ರಮದಿಂದ ಸೇರಿದ್ದರು. ಆದರೆ ಕೆಲವು ಮಂದಿಯಿಂದ ಉಂಟಾದ ಭಿನ್ನಾಭಿಪ್ರಾಯದಿಂದ ಅನೇಕ ಭಕ್ತರು ಬೇಸರದಿಂದ ಮರಳಿದರು ಎಂದು ಬೇಸರ ವ್ಯಕ್ತಪಡಿಸಿದರು. ಸಮಿತಿಯ
ನಿರ್ದೇಶಕ ಎಂ.ಜಿ.ದೇವಪ್ಪ ಮಾತನಾಡಿ, ಕಟ್ಟೆಮಾಡು ಗ್ರಾಮದಲ್ಲಿ ದುಡಿಮೆ ಮಾಡುವವರ ಸಂಖ್ಯೆ ಹೆಚ್ಚು ಇದೆ, ಸಾಂಪ್ರದಾಯಿಕ ಉಡುಪು ಧರಿಸಿ ಬಂದವರು ನಿಂತರೆ ಇತರರಿಗೆ ದೇವರನ್ನು ಕಾಣಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಎಲ್ಲರೂ ಪಂಚೆ, ಶರ್ಟ್ ಅಥವಾ ಪ್ಯಾಂಟ್, ಶರ್ಟ್ ರಿಸಿಕೊಂಡು ಬರಬೇಕು ಎಂದು ತಿಳಿಸಲಾಗಿದೆ. ಮಹಿಳೆಯರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದರು. 2015 ರಿಂದ ಎಲ್ಲಾ ಜಾತಿ ಜನಾಂಗದವರು ಒಗ್ಗೂಡಿ ದೇವಾಲಯವನ್ನು ಪರಿಶ್ರಮದಿಂದ ನಿರ್ಮಿಸಿದ್ದೇವೆ.ದೇವಾಲಯದಲ್ಲಿ ಸಮಾನತೆ ಇರಬೇಕು ಎನ್ನುವ ಉದ್ದೇಶಕ್ಕಾಗಿ ಸಾಂಪ್ರದಾಯಿಕ ಉಡುಪಿಗೆ ಅವಕಾಶ ನೀಡಿಲ್ಲ ಎಂದರು.
ಸಮಿತಿ ಸದಸ್ಯ ವೇಣುಗೋಪಾಲ್ ಮಾತನಾಡಿ, ಕಾವೇರಿ ನದಿಯ ಎರಡೂ ಬದಿಗಳಲ್ಲಿ ಶಿವನ ದೇವಾಲಯವಿದೆ, ಅಗಸ್ತ್ಯ ಮುನಿಗಳು ಮರಳಿನ ಲಿಂಗ ಮಾಡಿ ಮೃತ್ಯುಂಜಯ ಹೋಮ ಮಾಡಿದ ಕಾರಣಕ್ಕಾಗಿ ಈ ದೇವಾಲಯಕ್ಕೆ ಮೃತ್ಯುಂಜಯನ ಹೆಸರ ಬಂದಿದೆ ಎಂದರು.ಉಪ ಕಾರ್ಯದರ್ಶಿ ಮಹೇಶ್ ಡಿ.ಕೆ. ನಿರ್ದೇಶಕರಾದ ದೇವಿಪ್ರಸಾದ್ ಪಿ.ಎನ್ ಹಾಗೂ ಪುರುಷೋತ್ತಮ ಎಚ್.ಎಸ್ ಉಪಸ್ಥಿತರಿದ್ದರು.