ಹುಬ್ಬಳ್ಳಿ:
ಈ ನಾಲ್ಕಕ್ಷರ ಒಂದರ್ಥದಲ್ಲಿ ಧಾರವಾಡದ ಹೊಸ ನಾಲ್ಕು ತಂತಿಗಳಿದ್ದಂತೆ. ಇವು ಛಾಯಾಚಿತ್ರ ಕಲೆಯಲ್ಲಿ ಅರಳಿದ ತಂತಿಗಳು. ಪ್ರತಿ ಚಿತ್ರದಲ್ಲೂ ಸಾವಿರ ಪದಗಳ ನಿನಾದ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಹಂಬಲ. ಅವರವರ ಭಾವಕ್ಕೆ ಝೇಂಕಾರ, ಓಂಕಾರ, ಪರಮಾನಂದ ಪ್ರಾಪ್ತಿ ಮಾಡುವ ಚಿತ್ತ ಚಿತ್ತಾರದ ಪೋಟೋಗಳವು. ಅದು ಶಶಿಯ ಧ್ಯಾನಸ್ಥ ಸಾಧನೆಯ ಫಲ.
ತಮ್ಮ ಅದ್ವಿತೀಯ ಛಾಯಾಚಿತ್ರ ಕಲಾ ಸಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಜತೆಗೆ ತಾಯ್ನೆಲ ಧಾರವಾಡದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿರುವ ಸುಪ್ರಿಸಿದ್ಧ ಕಲಾವಿದ, ಸೃಜನಶೀಲ ಛಾಯಾಚಿತ್ರಕಾರ ಶಶಿ ಸಾಲಿ ಅವರಿಗೆ ನಾಳೆ (ಭಾನುವಾರ) ಧಾರವಾಡದ ಮಿತ್ರರೆಲ್ಲ ಸೇರಿ ಅಭಿನಂದನ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು, ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಬಹುಮುಖ ಕಲಾಸಾಧಕ:
ವರ್ಣಚಿತ್ರ, ಮುಖಪುಟ ವಿನ್ಯಾಸ, ಸಾಕ್ಷ್ಯಚಿತ್ರ ನಿರ್ಮಾಣ, ಚಲನಚಿತ್ರ. ಸ್ಥಿರಛಾಯಾ ಚಿತ್ರೀಕರಣ. ಛಾಯಾಚಿತ್ರ ವಸ್ತು ಸಂಗ್ರಹಾಲಯ ವಿನ್ಯಾಸ-ಮೊದಲಾದ ವಿಭಿನ್ನ ಕಲಾಪ್ರಕಾರಗಳಲ್ಲಿಯೂ ಸಮಾನ ಆಸಕ್ತಿ- ಪರಿಣಿತಿ ತೋರಿ, ಆಯಾ ಕ್ಷೇತ್ರಗಳಲ್ಲಿ ಎದ್ದು ಕಾಣುವ ಸಾಧನೆ ಮಾಡಿದ್ದಾರೆ ಶಶಿ. ತಮ್ಮ ಕಲಾಕೃತಿಗಳನ್ನು ಅನೇಕ ಕಲಾಪ್ರದರ್ಶನಗಳಲ್ಲಿ ಪ್ರಸ್ತುತಪಡಿಸಿ ಅಪಾರ ಜನಮೆಚ್ಚುಗೆಯನ್ನು ಗಳಿಸಿದ್ದಾರೆ. ಇವರ ''''ಹಕ್ಕಿಗಳ ಇಂಚರ. ಎಂಬ ೧೨೦ ವಿಧದ ಪಕ್ಷಿಗಳ ಛಾಯಾಚಿತ್ರ ಲಂಡನ್ನಿನಲ್ಲಿ ಪ್ರದರ್ಶನಗೊಂಡು ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ. ದೇಶ-ವಿದೇಶಗಳ ವನ್ಯಜೀವಿಗಳ ತಾಣಗಳಿಗೆ ಭೆಟ್ಟಿಯಿತ್ತು ಇವರು ತೆಗೆದ ಛಾಯಾಚಿತ್ರಗಳು ಅಪೂರ್ವ ದಾಖಲೆಗಳೆನಿಸಿವೆ.
ಸಾಲಿ ಸ್ಟುಡಿಯೋ:
ಉತ್ತರ ಕರ್ನಾಟಕ ಛಾಯಾಗ್ರಾಹಕರ ಸಂಘ ಸ್ಥಾಪಿಸಿ ಅದರ ಪ್ರಥಮ ಕಾರಾಧ್ಯಕ್ಷರಾಗಿ ಕಾರಮಾಡಿದ್ದಾರೆ. ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಛಾಯಗ್ರಹಣ ಕಂಪನಿಗಳ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಅನೇಕ ಸಾಹಿತ್ಯಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಸದಸ್ಯರಾಗಿ ಸಕ್ರೀಯವಾಗಿ ಭಾಗವಹಿಸುತ್ತ ಬಂದಿದ್ದಾರೆ.ಸಾರ್ಥಕ ಸಾಂಸ್ಕೃತಿಕ ಬದುಕು ನಡೆಸಿದ ಶಶಿ ಸಾಲಿ ಅವರಿಗೆ ಈಗ ''''ನೆನಪು ಹರಿಗೋಲು'''' ಎಂಬ ಅರ್ಥಪೂರ್ಣ ಅಭಿನಂದನ ಗ್ರಂಥ ಅರ್ಪಿಸಿ ಗೌರವಿಸಲಾಗುತ್ತಿದೆ.