ಶ್ರೀಗಳಿಗೆ ಅಭಿನಂದನಾ ಗ್ರಂಥ ಸಮರ್ಪಣೆ

KannadaprabhaNewsNetwork | Published : Jun 16, 2024 1:48 AM

ಸಾರಾಂಶ

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಕಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ನೇ ಜಾತ್ರಾಮಹೋತ್ಸವದಲ್ಲಿ ಶ್ರೀಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಅವರಿಗೆ ಗುರುವಾರ ನಿರಂಜನಜ್ಯೋತಿ ಅಭಿನಂದನಾ ಗ್ರಂಥವನ್ನು ಸಂಪಾದಕ ಮಂಡಳಿ ಅವರು ಸಮರ್ಪಿಸಿ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಕಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ನೇ ಜಾತ್ರಾಮಹೋತ್ಸವದಲ್ಲಿ ಶ್ರೀಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಅವರಿಗೆ ಗುರುವಾರ ನಿರಂಜನಜ್ಯೋತಿ ಅಭಿನಂದನಾ ಗ್ರಂಥವನ್ನು ಸಂಪಾದಕ ಮಂಡಳಿ ಅವರು ಸಮರ್ಪಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಂಥದ ಪ್ರಧಾನ ಸಂಪಾದಕ, ಸಂಶೋಧಕ ಡಾ.ಸೋಮನಾಥ ಯಾಳವಾರ ಮಾತನಾಡಿ, ನಾಡಿನಲ್ಲಿ ಇಂಗಳೇಶ್ವರ ಗ್ರಾಮದ ವಚನ ಶಿಲಾಮಂಟಪ ಎಲ್ಲ ಮಠಗಳಿಗೆ ಮಾದರಿಯಾಗುವಂತೆ ಚನ್ನಬಸವ ಸ್ವಾಮೀಜಿಗಳು ವಚನಗಳನ್ನು ಶಿಲೆಯಲ್ಲಿ ಬರೆಸುವ ಮೂಲಕ ವಚನ ಶಿಲಾ ಮಂಟಪವನ್ನು ನಿರ್ಮಾಣ ಮಾಡಿದ್ದು ಐತಿಹಾಸಿಕ ದಾಖಲೆಯಾಗಿದೆ. ಈ ಮಠವು ವಚನಗಳಿಗೆ ಮುಕುಟ ಮಣಿಯಂತೆ ಕಂಗೊಳಿಸುತ್ತಿದೆ. ಶ್ರೀಗಳು ಚನ್ನಬಸವಣ್ಣನವರ ಕರಣ ಹಸಿಗೆ ಪ್ರವಚನದ ಮೂಲಕ ಜನರ ಮನಸೂರೆಗೊಂಡಿದ್ದಾರೆ. ಇಂತಹ ಹಿರಿಯ ಶ್ರೀಗಳ ಕುರಿತು ೮೦೦ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡ ನಿರಂಜನ ಜ್ಯೋತಿ ಎಂಬ ಅಭಿನಂದನಾ ಗ್ರಂಥ ಜನರ ಮನಕ್ಕೆ ತಲುಪಲಿದೆ. ಈ ಗ್ರಂಥವು ನಾನಾ ಲೇಖಕರು ಬರೆದ ಉತ್ತಮ ಲೇಖನಗಳನ್ನು ಒಳಗೊಂಡಿದೆ. ಮುಂದಿನ ಜನಾಂಗಕ್ಕೆ ಶ್ರೀಮಠದ ಚನ್ನಬಸವ ಸ್ವಾಮೀಜಿಗಳ ಬದುಕು, ಅವರು ವಚನ ಶಿಲಾ ಮಂಟಪದ ನಿರ್ಮಾಣಕ್ಕೆ ಶ್ರಮಿಸಿದ ಕುರಿತು ಇತಿಹಾಸ ಸಿಗಲಿದೆ.ಇವರೊಬ್ಬರು ನಾಡಿನಲ್ಲಿ ಮಾದರಿ ಶ್ರೀಗಳಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಇಳಕಲ್ಲದ ಗುರುಮಹಾಂತ ಸ್ವಾಮೀಜಿ, ಡಾ.ಸಿದ್ದಲಿಂಗ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ನಿಡಸೋಸಿಯ ಜಗದ್ಗರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ವಿಜಯಪುರದ ಬಸವಲಿಂಗ ಸ್ವಾಮೀಜಿ, ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ವಿವಿಧ ಶ್ರೀಗಳು, ಶಾಸಕ ಅಪ್ಪಾಜಿ ನಾಡಗೌಡ, ಇನ್ನೊರ್ವ ಪ್ರಧಾನ ಸಂಪಾದಕ ಈರಣ್ಣ ಬೆಕಿನಾಳ, ಸಂಪಾದಕ ಮಂಡಳಿ ಸದಸ್ಯರಾದ ಡಾ.ವಿರೇಶ ಐಹೊಳ್ಳಿ, ಜಂಬುನಾಥ ಕಂಚ್ಯಾಣಿ, ಸಿದ್ದಲಿಂಗಪ್ಪ ಹದಿಮೂರ,ಯು.ಎನ್.ಕುಂಟೋಜಿ, ಸಂಗಮೇಶ ಕೆರಪ್ಪಗೋಳ, ಜಿ.ಜಿ.ಬೇವೂರ, ನಾಗೇಶ ಚಿಗರಿ, ಸಂಯೋಜಕರಾದ ನಿಂಗಪ್ಪ ಬೊಮ್ಮನಹಳ್ಳಿ, ಅಶೋಕಗೌಡ ಪಾಟೀಲ ಇತರರು ಇದ್ದರು.

Share this article