ಲೂಟಿ ಹೊಡೆದಿರುವುದೇ ಕಾಂಗ್ರೆಸ್‌ ಸಾಧನೆ

KannadaprabhaNewsNetwork | Published : May 22, 2025 1:26 AM
50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ‌ ಏರಿಕೆ ಮಾಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದವರ ಮೇಲೆ ಗದಾ ಪ್ರಹಾರ ಮಾಡಲಾಗಿದೆ.
Follow Us

ಹುಬ್ಬಳ್ಳಿ: ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಅಗತ್ಯವಾದ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೂ ಯಾವ ಸಾಧನೆಗೆ ಕಾಂಗ್ರೆಸ್ಸಿನವರು ಸಮರ್ಪಣೆ ಸಂಕಲ್ಪ ಸಮಾವೇಶ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.

ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲೂಟಿ ಹೊಡೆದಿದ್ದೇ ಇವರ ಸಾಧನೆ. ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂದು ಕಿಡಿಕಾರಿದರು.

50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ‌ ಏರಿಕೆ ಮಾಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದವರ ಮೇಲೆ ಗದಾ ಪ್ರಹಾರ ಮಾಡಲಾಗಿದೆ. ಸರ್ಕಾರಕ್ಕೆ ಎರಡು ವರ್ಷವಾಗಿದೆ ಎಂದು ಕಾಂಗ್ರೆಸ್ಸಿನವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಮಳೆಗೆ ಬೆಂಗಳೂರು ನಗರ ಮುಳುಗಿ ಹೋಗುತ್ತಿದೆ‌. ಯಾವ ಸಚಿವರು ಸಹ ಜಿಲ್ಲೆಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿಲ್ಲ. ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂದುಕೊಂಡಿದ್ದಾರೆ ಎಂದರು.

ಬಡ್ಡಿ ಸಮೇತ ವಸೂಲಿ: ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ಧಾರಿ, ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಯಾರು ಅನುದಾನ ನೀಡಿದ್ದಾರೆ? ಎಂದು ಪ್ರಶ್ನಿಸಿದರು.

ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ ಎಂದು ಹೇಳುತ್ತಾರೆ. ಆದರೆ, ಬಿಜೆಪಿ ಸರ್ಕಾರ ಇರುವ ಇತರ ರಾಜ್ಯಗಳಲ್ಲಿ ಏಕೆ ಬೆಲೆ ಏರಿಕೆಯಾಗಿಲ್ಲ. ಗುತ್ತಿಗೆದಾರರಿಗೆ ₹64 ಸಾವಿರ ಕೋಟಿ ನೀಡುವುದು ಬಾಕಿ ಇದೆ. ಇದು 60 ಪರ್ಸೆಂಟ್‌ ಸರ್ಕಾರ. ಕೆಲವು ಕಡೆ 100 ಪರ್ಸೆಂಟ್ ಕಮಿಷನ್‌ ಪಡೆಯುತ್ತಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಸಾಧನೆ‌ ಶೂನ್ಯವಾಗಿದೆ. ಹಿಂದೂಗಳ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು‌ ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ಮಾಧ್ಯಮ ವಕ್ತಾರ ರವಿ ನಾಯಕ ಸೇರಿದಂತೆ ಹಲವರಿದ್ದರು.

ಖರ್ಗೆ ಗುಪ್ತಚರ ಇಲಾಖೆ ಮುಖ್ಯಸ್ಥರಾ?: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏನಾದರೂ ಗುಪ್ತಚರ ಇಲಾಖೆ‌ ಮುಖ್ಯಸ್ಥರಾಗಿದ್ದರಾ? ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದರು.

ಭಯೋತ್ಪಾದಕ ದಾಳಿ ಬಗ್ಗೆ ಮೋದಿ ಅವರಿಗೆ ಮೊದಲೇ ಗೊತ್ತಿತ್ತು ಎಂಬ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ ಅವರು, ಮೊದಲೇ ಗೊತ್ತಿದ್ದರೆ ಕೆಡವಿ ಹಾಕಿ ಹೊಡೆಯುತ್ತಿದ್ದರು. ಉಗ್ರಗಾಮಿಗಳ ಅಡುಗತಾಣಗಳನ್ನು ನಾಶ ಮಾಡಿದ್ದೇವೆ. ಇದನ್ನು ಪಾಕಿಸ್ತಾನ ಪ್ರಧಾನಿಯೇ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಎಂದರು.

ಪಹಲ್ಗಾಮ್ ದಾಳಿ ಭದ್ರತಾ ವೈಫಲ್ಯ. ಮೋದಿ ರಾಜೀನಾಮೆ ನೀಡಬೇಕೆಂದು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಮುಂಬೈನಲ್ಲಿ ದಾಳಿ ನಡೆದಾಗ 250ಕ್ಕೂ ಹೆಚ್ಚು ಜನ‌ ಸಾವನ್ನಪ್ಪಿದರು. ಆಗ ಪ್ರಧಾನಿಯಾಗಿದ್ದ ಮನಮೋಹನಸಿಂಗ್ ನೈತಿಕ ಹೊಣೆ ಹೊತ್ತು‌ ರಾಜೀನಾಮೆ ನೀಡಿದ್ದರಾ? ಎಂದರು.

ರಾಹುಲ್‌ ವಿರುದ್ಧ ಟೀಕೆ: ಹಿಂದುಳಿದ ವರ್ಗಗಳ ವಾಲ್ಮೀಕಿ ನಿಗಮದ ₹45 ಸಾವಿರ ಕೋಟಿ ದುರುಪಯೋಗ ಆಗಿದೆ. ಸಚಿವ ನಾಗೇಂದ್ರ ಈ ವಿಷಯಕ್ಕೆ ರಾಜೀನಾಮೆ ಕೂಡ ಕೊಟ್ಟು, ಜೈಲಿಗೂ ಹೋಗಿ ಬಂದಿದ್ದುಂಟು. ಆದರೆ ಅವರನ್ನೇ ಪಕ್ಕಕ್ಕೆ ಕೂಡಿಸಿಕೊಂಡು ರಾಹುಲ್‌ ಗಾಂಧಿ ಭಾಷಣ ಮಾಡುತ್ತಾರೆ. ಜತೆಗೆ ಲೂಟಿ ಮಾಡಿರುವ ಹಣ ಮರಳಿ ಕಟ್ಟಿದರೆ ಮತ್ತೆ ಸಚಿವರನ್ನಾಗಿ ಮಾಡುತ್ತಾರಂತೆ. ಜಿಂದಾಲ್‌ನಲ್ಲಿ ಕುಳಿತು ನಾಗೇಂದ್ರಗೆ ಸಿಎಂ ಹೇಳಿದ್ದಾರೆ. ಅದಕ್ಕಾಗಿ ನಾಗೇಂದ್ರ ಇದೀಗ ವಸೂಲಿಗಿಳಿದಿದ್ದಾರೆ. ಸಂಸದ ತುಕಾರಾಂಗೆ ₹20 ಕೋಟಿ, ಕೆಲ ಎಂಎಲ್‌ಎಗಳಿಗೆ ₹5-6 ಕೋಟಿ ನೀಡಿರುವುದಾಗಿ ಸಿಎಂ ಮುಂದೆ ನಾಗೇಂದ್ರ ಹೇಳಿದ್ದಾರಂತೆ ಎಂದರು.