ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜು ಎಂಬುದನ್ನು ಭೂತದಂತೆ ತೋರಿಸುತ್ತಿದ್ದಾರೆ. 2013-14ರಲ್ಲೇ ಕಾಲೇಜು ಘೋಷಿಸಿ ಈಗ ಅದಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ರಾಜೀವ ಗಾಂಧಿ ಆರೋಗ್ಯ ವಿವಿಯಲ್ಲಿನ ಹಣ ತರುವುದಾಗಿ ಹೇಳುತ್ತಿದ್ದಾರೆ. ಇಲ್ಲಿನ ಬಿಟಿಡಿಎದಲ್ಲಿನ ₹388 ಕೋಟಿ ಬಾಚಿಕೊಂಡು ಹೋಗಿ ₹319 ಕೋಟಿ ಕಾಲೇಜಿಗೆ ನೀಡಿರುವುದಾಗಿ ಬಡಾಯಿಕೊಚ್ಚಿಕೊಳ್ಳುತ್ತಿದ್ದಾರೆ. ಕಾಲೇಜು ಸ್ಥಾಪನೆ ಇಷ್ಟು ದೊಡ್ಡ ಸಾಧನೆಯೇ. 25 ವರ್ಷಗಳ ಹಿಂದೆಯೇ ನಾವು ಬವಿವ ಸಂಘದಿಂದ ಮಾಡಿ ತೋರಿಸಿದ್ದೇವೆ. ಒಂದು ಕಾಲೇಜು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಇಷ್ಟು ವರ್ಷಗಳ ಕಾಲ ಬೇಕಾಗಿತ್ತೇ ಎಂದು ಪ್ರಶ್ನಿಸಿದರು.
2025ರ ಬಜೆಟ್ ನಲ್ಲಿ ಕಾಲೇಜು ಸ್ಥಾಪಿಸುವುದಾಗಿ ಮತ್ತೊಮ್ಮೆ ಪ್ರಸ್ತಾಪಿಸಿದ ನಂತರ ಆಗಲೇ ಭೂಮಿಪೂಜೆ ನೆರವೇರಿಸಿದರೆ ಒಪ್ಪಬಹುದಿತ್ತು. ಮಾ.15ಕ್ಕೆ ಚುನಾವಣೆ ಘೋಷಣೆ ಆಗುತ್ತದೆ ಎಂಬುದನ್ನು ಅರಿತು ಮಾ.14ಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸುತ್ತಾರೆ ಎಂದರೆ ಇದು ಗಿಮಿಕ್ ಅಲ್ಲವೇ ? ಎಂದು ಪ್ರಶ್ನಿಸಿದರು.ನಮ್ಮ ಅವಧಿಯಲ್ಲಿ 6 ರಸ್ತೆಗಳ ಅಭಿವೃದ್ಧಿಗಾಗಿ ₹139 ಕೋಟಿ ಮಂಜೂರು ಮಾಡಿಸಲಾಗಿತ್ತು. ಶಿರೂರು, ಭಗವತಿ ಏತನೀರಾವರಿ ಯೋಜನೆ ಮೂಲಕ 50 ಸಾವಿರ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಲು ₹600 ಕೋಟಿ ಮಂಜೂರು ಮಾಡಲಾಗಿತ್ತು. ಅದೆಲ್ಲವನ್ನೂ ಈ ಸರ್ಕಾರ ಕಿತ್ತುಕೊಂಡಿತು. ಮೂರು ವರ್ಷದಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ. ಬೋಗಸ್ ಗ್ಯಾರಂಟಿಯಲ್ಲಿ ಈ ಸರ್ಕಾರ ಕಳೆದು ಹೋಗಿದೆ. ನಡುಗಡ್ಡೆ ಜನರ ಬದುಕನ್ನು ಅತಂತ್ರಗೊಳಿಸಿದೆ.ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಗೆ ಅವಕಾಶ ಸಿಕ್ಕಿದ್ದು ಕಡಿಮೆ. ಆದರೆ ಸಿಕ್ಕಾಗಲೆಲ್ಲ. ನಾವು ಶಕ್ತಿ ಮೀರಿ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದು ಹೇಳಿದರು.ದಿ.ಎಚ್.ವೈ.ಮೇಟಿ ಅವರು ಇದ್ದಾಗಲೂ ಕಾಣದ ಕೈ ಕ್ಷೇತ್ರವನ್ನು ಆಳುತಿತ್ತು. ಬಾದಾಮಿಯಲ್ಲೂ ಕೈ ಆಡಿಸಿ ಬಂದಿತ್ತು. ನಂತರ ವರುಣಾ ಕ್ಷೇತ್ರದಲ್ಲೂ ಕೈ ಆಡಿಸಿತ್ತು. ಚುನಾಯಿತು ಪ್ರತಿನಿಧಿ ಬಿಟ್ಟು ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಬಳಿ ಕೈಕಟ್ಟಿ ನಿಲ್ಲಲು ಕಾಂಗ್ರೆಸ್ ನಾಯಕರಿಗೆ ಸ್ವಾಭಿಮಾನ ಎಂಬುದೇ ಇಲ್ಲ ಕಿಚಾಯಿಸಿದರು. ಕ್ಷೇತ್ರದ ಜನ ಪ್ರಬುದ್ಧರಾಗಿದ್ದಾರೆ. ಇಂಥ ಡೀಲ್ ಮಾಸ್ಟರ್ ಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ನಗರ ಘಟಕದ ಅಧ್ಯಕ್ಷ ಬಸವರಾಜ ಹುನಗುಂದ ಮತ್ತಿತರರು ಇದ್ದರು.
ಇತ್ತೀಚೆಗೆ ಶಿವಾಜಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ವಿಷಯ ಪ್ರಸ್ತಾಪಿಸಿದ ಅವರು, ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಇಂತಹ ಕೃತ್ಯ ಎಸೆಗಿದರೆ ಅವರ ಹಿರಿಮೆ ಕಡಿಮೆ ಆಗುವುದಿಲ್ಲ. ಅವರು ಹಿಂದೂ ಹೃದಯ ಸಾಮ್ರಾಟರಾಗಿ ಶಾಶ್ವತ ನೆಲೆ ಕಂಡಿದ್ದಾರೆ. ಮುಸ್ಲಿಮರನ್ನು ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಅವರ ಉದ್ಧಾರ ಮಾಡದೆ ಕಲ್ಲು, ಚಪ್ಪಲಿ ಎಸೆಯುವುದಕ್ಕಷ್ಟೇ ಬಳಸಿಕೊಂಡಿದೆ. ಮುಸ್ಲಿಮರು ಅಬ್ದುಲ್ ಕಲಾಂರಂಥ ಆಗಬೇಕೆ ವಿನಃ ಬಿನ್ ಲಾಡೆನ್ ಅನುಯಾಯಿಗಳಾಗಬಾರದು ಎಂದು ಮಾರ್ಮಿಕವಾಗಿ ಹೇಳಿದರು.