ಬ್ಯಾಡಗಿ: ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆಗಳು ಸಾಬೀತಾಗುತ್ತಿವೆ. ಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿಸದಿದ್ದರೇ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಗ್ಯಾರಂಟಿ ಹೆಸರಲ್ಲಿ ಜನರಿಗೆ ಮಂಕು ಬೂದಿ: ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕು ಬೂದಿ ಎರಚುತ್ತಿರುವ ಕಾಂಗ್ರೆಸ್ ರಾಜ್ಯ ಬೊಕ್ಕಸವನ್ನು ಲೂಟಿ ಹೊಡೆಯುತ್ತಿದೆ. ಯಾರ ದುಡ್ಡಾದರೇನು ಜನರ ತೆರಿಗೆ ನುಂಗಲು ಇವರಿಗೆ ಏನೊಂದು ಸಾಕಾಗುತ್ತಿಲ್ಲ. ವಾಲ್ಮೀಕಿ ನಿಗಮದ ಹಣವನ್ನು ನುಂಗಿದ ಸರ್ಕಾರ ಹಿಂದುಳಿದ ವರ್ಗಗಳಿಗೆ ಮೀಸಲಿದ್ದಂತಹ 40 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡುತ್ತಿದ್ದು, ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನರು ಹಿಂದೆಂದೂ ಕಂಡಿಲ್ಲ ಎಂದರು.
ಹಿಂದೂ ವಿರೋಧಿ ಧೋರಣೆ: ಓಲೈಕೆ ರಾಜಕಾರಣದಿಂದ ರಾಜ್ಯದ ಬಹುತೇಕ ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಕೈಬಿಡಲಿದ್ದಾರೆ. ಅಹಿಂದ ನಾಯಕ ಎಂದು ಬೊಬ್ಬೆ ಹೊಡೆಯುವ ಮುಖ್ಯಮಂತ್ರಿಗಳು ಎಸ್ಸಿ ಮತ್ತು ಎಸ್ಟಿ ಸೇರಿದಂತೆ ಅಹಿಂದ ವರ್ಗಕ್ಕೆ ಮೀಸಲಿಟ್ಟಿದ್ದ ಅನುದಾನ ಬಳಕೆ ಮಾಡಿಕೊಂಡು ಸರ್ಕಾರ ನಡೆಸುವಂತಹ ಸ್ಥಿತಿಗೆ ಬಂದಿದ್ದಾರೆ. ಹಿಂದುಳಿದ ವರ್ಗದ ಹಣ ದುರುಪಯೋಗ ಮಾಡಿಕೊಂಡ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ನಾಚಿಕೇಗೇಡಿನ ಸಂಗತಿ ಎಂದರು.ಸಂಘಟನೆಗೆ ಸಮಯ ಮೀಸಲಿಡಿ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಬಿಜೆಪಿ ವಿವಿಧ ಮಂಡಳಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಪಕ್ಷದ ಸಂಘಟನೆ ಮಾಡಲು ಸಮಯನ್ನು ಮೀಸಲಿಡಬೇಕು, ಬಿಜೆಪಿ ನಿಮಗೆ ಕೊಟ್ಟಿರುವ ಆದೇಶ ಪ್ರತಿ ಕೇವಲ ಕಾಗದವಲ್ಲ ಬದಲಾಗಿ ಜನರು ಗುರುತಿಸಲು ನೀಡಿದ ಟ್ರಂಪ ಕಾರ್ಡ ಇದನ್ನ ಬಳಸಿ ಪಕ್ಷದ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮವಹಿಸಬೇಕು ಬಿಜೆಪಿ ಇದೊಂದು ಕಾರ್ಯಕರ್ತರ ಪಕ್ಷ ಹೀಗಾಗಿ ಪಕ್ಷ ಸಂಘಟನೆಗೆ ನಿಮ್ಮ ಕೊಡುಗೆ ನಿಮ್ಮಿಲ್ಲಿರುವ ಕಾರ್ಯಕ್ಷಮತೆ ಗುರ್ತಿಸಲಿದೆ ಎಂದರು.