ಜಿಪಂ, ತಾಪಂ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಒತ್ತಡ

KannadaprabhaNewsNetwork | Published : Dec 1, 2024 1:32 AM

ಸಾರಾಂಶ

ಬೇಗನೆ ಜಿಪಂ, ತಾಪಂ ಚುನಾವಣೆ ನಡೆಸಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಕಾರ್ಯಕರ್ತರದ್ದು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ವಿಧಾನಸಭೆ, ಲೋಕಸಭೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕೂಡ ಮುಗಿದಿದೆ. ಆದರೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮಾಡುತ್ತಿಲ್ಲವೇಕೆ? ಇನ್ನಾದರೂ ಮಾಡಿ ಮುಗಿಸಿ.

ಇದು ಜಿಪಂ, ತಾಪಂ ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಕೆಪಿಸಿಸಿ ಹಾಗೂ ಸರ್ಕಾರವನ್ನು ಆಗ್ರಹಿಸುತ್ತಿರುವ ಪರಿ.

ಹಾಗೆ ನೋಡಿದರೆ ಕಳೆದ ನಾಲ್ಕೂವರೆ ವರ್ಷಗಳ ಹಿಂದೆಯೇ ಜಿಪಂ, ತಾಪಂ ಅವಧಿ ಮುಕ್ತಾಯವಾಗಿದೆ. ಆಗ ಬಿಜೆಪಿ ಸರ್ಕಾರವಿತ್ತು. ಆದರೆ, ಆಗ ಚುನಾವಣೆ ನಡೆಯಲಿಲ್ಲ. ಮುಂದೆ ಎಂಎಲ್‌ಸಿ, ಎಂಎಲ್ಎ ಚುನಾವಣೆಗಳೆಲ್ಲ ಬಂದವು. ವಿಧಾನಸಭೆ ಚುನಾವಣೆಗೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ ನಿರೀಕ್ಷಿಸಿದಷ್ಟು ಸ್ಥಾನಗಳು ಬರದಿದ್ದರೆ ಎಂಎಲ್ಎ ಎಲೆಕ್ಷನ್‌ಗೆ ಕಷ್ಟವಾಗುತ್ತದೆ ಎಂದುಕೊಂಡು ಚುನಾವಣೆ ನಡೆಸಲಿಲ್ಲ ಎಂಬ ಆರೋಪ ಆಗ ಕಾಂಗ್ರೆಸ್ಸಿಗರು ಮಾಡುತ್ತಿದ್ದರು.

ವಿಧಾನಸಭೆ, ವಿಧಾನ ಪರಿಷತ್‌, ಲೋಕಸಭೆ ಚುನಾವಣೆಗಳಲ್ಲೂ ಈ ವಿಷಯವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದುಂಟು. ಇದೀಗ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬಂದು ಬರೋಬ್ಬರಿ ಒಂದೂವರೆ ವರ್ಷವಾಗಿದೆ. ಆದರೂ ಜಿಪಂ-ತಾಪಂ ಚುನಾವಣೆ ನಡೆಸುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಜತೆಗೆ ಮೂರು ಕ್ಷೇತ್ರಗಳ ಉಪಚುನಾವಣೆಯೂ ಮುಗಿದು ಮೂರರಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಇದರ ಹುಮ್ಮಸ್ಸು ಕಾಂಗ್ರೆಸ್‌ ಮುಖಂಡರು, ಟಿಕೆಟ್‌ ಆಕಾಂಕ್ಷಿಗಳಲ್ಲಿ ಹೆಚ್ಚಿಸಿದೆ.

ಇನ್ನು ಎಷ್ಟು ದಿನ

ನಾಲ್ಕೂವರೆ ವರ್ಷದ ಹಿಂದೆಯೇ ಜಿಪಂ, ತಾಪಂ ಅವಧಿ ಮುಕ್ತಾಯವಾಗಿದೆ. ಆಗಿನಿಂದಲೂ ಟಿಕೆಟ್ ಆಕಾಂಕ್ಷಿಗಳು ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಜನರಿಗೆ ಹತ್ತಿರವಾಗುತ್ತಿದ್ದಾರೆ. ಟಿಕೆಟ್ ಪಡೆಯಲೇಬೇಕೆಂಬ ಹಂಬಲದಿಂದ ನಾನಾ ಕಸರತ್ತು ಕೂಡ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಅವರ ವಿರುದ್ಧ ನಾವೇ ಆರೋಪಿಸುತ್ತಿದ್ದೆವು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿಗೆ ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆಯೇ ಇಲ್ಲ ಎಂದು ತೆಗಳುತ್ತಿದ್ದೆವು. ಇದೀಗ ನಮ್ಮದೇ ಸರ್ಕಾರವಿದೆ. ನಮ್ಮ ಸರ್ಕಾರವೂ ಅದನ್ನೇ ಮಾಡುತ್ತಿದೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಲಾರಂಭಿಸಿದೆ. ಅದಕ್ಕಾಗಿ ಬೇಗನೆ ಜಿಪಂ, ತಾಪಂ ಚುನಾವಣೆ ನಡೆಸಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಕಾರ್ಯಕರ್ತರದ್ದು.

ಈ ಸಂಬಂಧ ಕಾರ್ಯಕರ್ತರು, ಪಕ್ಷದ ಜಿಲ್ಲಾಧ್ಯಕ್ಷರಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದುಂಟು. ಪಕ್ಷ ನಡೆಸುವ ಪ್ರತಿ ಸಭೆಗಳಲ್ಲೂ ಈ ಬಗ್ಗೆ ಆಗ್ರಹದ ಮಾತು ಕೇಳಿ ಬರುತ್ತಲೇ ಇರುತ್ತದೆ. ಮುಖಂಡರು, ವೀಕ್ಷಕರಿಂದ ಬರೀ ಶೀಘ್ರವೇ ಚುನಾವಣೆ ನಡೆಸಲಾಗುವುದು ಎಂಬ ಹಾರಿಕೆ ಉತ್ತರವಷ್ಟೇ ಬರುತ್ತಿದೆಯೇ ಹೊರತು ಸರ್ಕಾರ ಬಂದು ಒಂದೂವರೆ ವರ್ಷವಾದರೂ ಚುನಾವಣೆ ನಡೆಸಲು ಮಾತ್ರ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕಾರ್ಯಕರ್ತರದ್ದು.

ಲೋಕಸಭೆ ಚುನಾವಣೆಯಲ್ಲೂ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದೇವೆ. ಜತೆಗೆ 3 ಕ್ಷೇತ್ರಗಳ ಉಪಚುನಾವಣೆಯಲ್ಲೂ ಗೆದ್ದಿದ್ದೇವೆ. ಇದೀಗ ನಮ್ಮದೇ ಸರ್ಕಾರವಿದೆ. ಹೀಗಾಗಿ ಉತ್ತಮ ವಾತಾವರಣವಿದೆ. ಪಕ್ಷದ ಗೆಲುವಿಗೆ ಇದಕ್ಕಿಂತಲೂ ಇನ್ನೇನು ಬೇಕು ಎಂಬ ಪ್ರಶ್ನೆ ಕಾರ್ಯಕರ್ತರದ್ದು. ಆದಕಾರಣ ಈಗಲೇ ಜಿಪಂ, ತಾಪಂ ಚುನಾವಣೆ ನಡೆಸಲು ಕ್ರಮಕೈಗೊಳ್ಳಿ. ಇಲ್ಲದಿದ್ದಲ್ಲಿ ಜನರು ಒತ್ತಟ್ಟಿಗಿರಲಿ, ಟಿಕೆಟ್‌ ಆಕಾಂಕ್ಷಿಗಳ ಆಕ್ರೋಶ ಪಕ್ಷದ ವಿರುದ್ಧ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬುದು ಜಿಲ್ಲಾ ಕಾಂಗ್ರೆಸ್‌ ಮುಖಂಡರದ್ದು.ಶೀಘ್ರ ಚುನಾವಣೆ ನಡೆಸಿ

ಜಿಪಂ, ತಾಪಂ ಚುನಾವಣೆಗೆ ಅಗತ್ಯ ಸಿದ್ಧತೆಯನ್ನು ನಮ್ಮ ಪಕ್ಷವೂ ಮಾಡಿಕೊಂಡಿದೆ. ಆದರೆ ಚುನಾವಣೆ ಯಾವಾಗ ನಡೆಸಲಾಗುತ್ತಿದೆಯೋ ಗೊತ್ತಿಲ್ಲ. ನಮ್ಮದೇ ಸರ್ಕಾರವಿದೆ. ಆದಷ್ಟು ಬೇಗನೆ ಚುನಾವಣೆ ನಡೆಸಿ ಎಂಬ ಬೇಡಿಕೆ ಟಿಕೆಟ್‌ ಆಕಾಂಕ್ಷಿಗಳದ್ದು ಜಾಸ್ತಿ ಇದೆ.

ಅನೀಲಕುಮಾರ ಪಾಟೀಲ, ಜಿಲ್ಲಾಧ್ಯಕ್ಷ, ಧಾರವಾಡ ಗ್ರಾಮೀಣ ಕಾಂಗ್ರೆಸ್ ಸಮಿತಿ

Share this article