ಸಂಘಟನಾ ಪರ್ವ ಮಂಡಲದ ಕಾರ್ಯಾಗಾರದಲ್ಲಿ ಮಾಜಿ ಸಚಿವ
ಕನ್ನಡಪ್ರಭ ವಾರ್ತೆ ಕುಕನೂರು
ಕಾಂಗ್ರೆಸ್ ದುರಾಡಳಿತದ ಪರಮಾವಧಿಯಲ್ಲಿದ್ದು, ಹಗಲು ದರೋಡೆಗೆ ನಿಂತಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಘಟನೆ ಹೊಂದಿದ ಪಕ್ಷವೆಂದರೆ ಅದು ಬಿಜೆಪಿ. ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದರೆ, ಜಿಲ್ಲೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಪ್ರಥಮ ಸ್ಥಾನ ಪಡೆದಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಸಂಘಟನಾ ಪರ್ವ ಮಂಡಲದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಅತ್ಯುತ್ತಮ ಸಂಘಟನೆ ಹೊಂದಿದ ಪಕ್ಷ ಅಂದರೆ ಅದು ಬಿಜೆಪಿ. ಯಲಬುರ್ಗಾ ವಿಧಾನಸಭಾ ಕ್ಷೇತ್ರ 33 ಸಾವಿರ ಪ್ರಾಥಮಿಕ ಸದಸ್ಯತ್ವ ಹೊಂದುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ 6 ದಿನದಲ್ಲಿ 7 ಸಾವಿರ ಪ್ರಾಥಮಿಕ ಸದಸ್ಯತ್ವವನ್ನು ಮಾಡುವ ಮೂಲಕ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆಯಬೇಕು. ಆ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಕರೆ ನೀಡಿದರು.ಕರ್ನಾಟಕದಲ್ಲಿ ಹಗಲು ದರೋಡೆ ಮಾಡುವ ಸರ್ಕಾರ ಯಾವುದಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯನವರ ಸರ್ಕಾರವಾಗಿದೆ. ಮುಡಾ, ವಾಲ್ಮೀಕಿ ಹಗರಣ, ವಕ್ಫ್ ಬೋರ್ಡ್ ವಿವಾದ, ಅಧಿಕಾರಿಗಳ ಸರಣಿ ಸಾವು ಸೇರಿದಂತೆ ಬರೀ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುವ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ಕಳಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಗುಳಗಣ್ಣವರ್ ಮಾತನಾಡಿ, ಜಿಲ್ಲೆಯಲ್ಲಿ 1.32 ಲಕ್ಷ ಜನ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಜಿಲ್ಲೆಯಾಗಿದೆ ಎಂದರು.ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್. ಪೊಲೀಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಸಿದ್ದು ಮಣ್ಣಿನವರು, ಶರಣಪ್ಪ ಬಣ್ಣದಬಾವಿ, ಅಂದಯ್ಯ, ನರಸಿಂಗರಾವ್ ಕುಲಕರ್ಣಿ, ಕೆ . ಮಹೇಶ್, ಶಿವಲೀಲಾ ದಳವಾಯಿ ಇತರರು ಇದ್ದರು.