ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಎಸ್.ವಿ. ಸಂಕನೂರ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಘಟನಾಯಕರು ತಳಮಟ್ಟದಿಂದಲೇ ಸಂಕನೂರ ಪರ ಕೆಲಸ ಮಾಡಿದ್ದಾರೆ.
ಹಳಿಯಾಳ: ಸಂವಿಧಾನಾತ್ಮಕ ಹುದ್ದೆ ಹಾಗೂ ಸಂಸ್ಥೆಗಳ ವಿರುದ್ಧ ಕಾಂಗ್ರೆಸ್ ಆಧಾರರಹಿತ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದೆ. ಈ ಪಕ್ಷದ ವಿರುದ್ಧ ಪ್ರಜ್ಞಾವಂತರು ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಎಚ್ಚರಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ದೇಶ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ದೇಶದ್ರೋಹಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಸಂವಿಧಾನದ ಮೂಲ ಆಶಯ ಹಾಗೂ ತತ್ವಗಳನ್ನು ಪಾಲಿಸದೆ, ಸಂವಿಧಾನವನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡದೆ, ದೇಶದಲ್ಲಿ ಅರಾಜಕತೆ ಸೃಷ್ಟಿಸುವವರ ಜತೆ ಕೈಜೋಡಿಸಿ ದೇಶದ ಹಿತಕ್ಕೆ ಮಾರಕವಾಗಿದ್ದಾರೆ. ಸರ್ಕಾರದ ನೀತಿ ಮತ್ತು ಯೋಜನೆಗಳಲ್ಲಿ ದೋಷವಿದ್ದರೆ ಪ್ರತಿಭಟನೆ ನಡೆಸಲಿ. ಆದರೆ ಕಾಂಗ್ರೆಸ್‌ನವರು ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಪ್ರತಿಭಟಿಸುತ್ತಾರೆ. ನಕ್ಸಲರು ಮತ್ತು ದೇಶದ್ರೋಹಿಗಳ ಪರ ಮಾತನಾಡುವವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕುಟುಕಿದರು.
ಸಂಕನೂರ ಗೆಲುವು ಗ್ಯಾರಂಟಿ:
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಎಸ್.ವಿ. ಸಂಕನೂರ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಘಟನಾಯಕರು ತಳಮಟ್ಟದಿಂದಲೇ ಸಂಕನೂರ ಪರ ಕೆಲಸ ಮಾಡಿದ್ದಾರೆ. ಪದವೀಧರರ ಹಿತಕ್ಕೆ ಬದ್ಧರಾಗಿರುವ ಸಂಕನೂರ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರ:
ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನೀಡಿದ ಭರವಸೆಗಳನ್ನು ಈಡೇರಿಸಲಾಗದೆ, ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ರಾಜ್ಯವನ್ನು ಕತ್ತಲ ಕೂಪಕ್ಕೆ ತಳ್ಳಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಕಚೇರಿಯಿಂದ ಹಿಡಿದು ಶಾಸಕರ ಕಚೇರಿ ವರೆಗೆ ನಿರಂತರ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳ ಬಳಿ ಜನಪ್ರತಿನಿಧಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಲಂಚದ ಹಣದಲ್ಲಿ ಕೆಲ ಪಾಲು ಕಾಂಗ್ರೆಸ್ ಹೈಕಮಾಂಡ್ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನಮಠ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಪ್ರಮುಖರಾದ ಸೋನಪ್ಪ ಸುಣಕಾರ, ಹನುಮಂತ ಚಿನಗಿನಕೊಪ್ಪ, ಜಯಲಕ್ಷ್ಮಿ ಚೌಹಾಣ, ರತ್ನಮಾಲಾ ಮುಳೆ, ಉದಯ ಸಕ್ಕಪ್ಪನವರ, ಉದಯ ಜಾಧವ, ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.