ದೇಶದ ಮಹಿಳೆಯರಿಗೆ ದ್ರೋಹ ಬಗೆದ ಕಾಂಗ್ರೆಸ್

KannadaprabhaNewsNetwork |  
Published : Apr 22, 2026, 01:30 AM IST
 | Kannada Prabha

ಸಾರಾಂಶ

ಮಹಿಳಾ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧ ಜೆಡಿಎಸ್ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಮಹಿಳಾ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧ ಜೆಡಿಎಸ್ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿ ಖಂಡಿಸಿದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್. ನಿಂಗಪ್ಪ ಅವರ ನೇತೃತ್ವದಲ್ಲಿ ಮುಖಂಡರು ಕಾರ್ಯಕರ್ತರು ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ ಖಂಡಿಸುವ ಫಲಕಗಳನ್ನು ಹಿಡಿದು ಜೆಡಿಎಸ್ ಕಚೇರಿಯಿಂದ ಬಿಜಿಎಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಮಂಡಿಸಿದ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಮಸೂದೆ ತಿರಸ್ಕರಿಸಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಮಹಿಳಾ ವಿರೋಧಿ ನಿಲುವು ಬಹಿರಂಗವಾಗಿದೆ. ಮಹಿಳೆಯರು ರಾಜಕೀಯ ಅಧಿಕಾರ ಪಡೆಯುವುದು ಕಾಂಗ್ರೆಸ್‌ನವರಿಗೆ ಬೇಕಾಗಿಲ್ಲ, ಅವರನ್ನು ಕೇವಲ ಮತ ನೀಡುವುದಕ್ಕಷ್ಟೇ ಸೀಮಿತ ಮಾಡಿಕೊಂಡಿವೆ ಎಂದು ಟೀಕಿಸಿದರು. ಮಹಿಳೆಯರಿಗೆ ಸಮಾನ ಅವಕಾಶ ದೊರೆಯಬೇಕು ಎಂದು ಬಸವಣ್ಣನವರು ಆಗಲೇ ಪ್ರತಿಪಾದಿಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶ ಸಿಗಬೇಕು ಎಂದು ಸಂವಿಧಾನದಲ್ಲಿ ತಿಳಿಸಿದ್ದಾರೆ. ಮಹಿಳೆಯರನ್ನು ರಾಜಕೀಯ ಅಧಿಕಾರದಿಂದ ದೂರವಿಟ್ಟು ಕಾಂಗ್ರೆಸ್ ನಾಯಕರು ಸಂವಿಧಾನ ವಿರೋಧಿಗಳಾಗಿದ್ದಾರೆ. ದೇಶದಲ್ಲಿ 70 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳೆಯರಿಗೆ ಅಧಿಕಾರ ಸಿಗಬೇಕಾಗಿರುವುದು ಸಾಮಾಜಿಕ ನ್ಯಾಯ. ಮಹಿಳೆಯರನ್ನು ಕಾಂಗ್ರೆಸ್ ಪಕ್ಷ ಇಷ್ಟೊಂದು ಹೀನಾಯವಾಗಿ ಕಾಣುತ್ತಿರುವುದು ದೇಶದ ಮಹಿಳೆಯರಿಗೆ ಮಾಡಿದ ದ್ರೋಹ ಎಂದು ಟೀಕಿಸಿದರು.ತುರುವೇಕರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ಮಹಿಳೆಯರ ಮತ ಬೇಕು, ಅವರಿಗೆ ಅಧಿಕಾರ ಕೊಡುವುದು ಬೇಕಾಗಿಲ್ಲ, ಗ್ಯಾರಂಟಿಗಳ ಆಮಿಷವೊಡ್ಡಿ ಅವರ ಮತ ಪಡೆಯಬಹುದು ಎಂಬ ಹುಂಬುತನ ಕಾಂಗ್ರೆಸ್ ನಾಯಕರಿಗಿದೆ. ಈಗ ಮಹಿಳೆಯರು ಜಾಗೃತರಾಗಿದ್ದಾರೆ. ಕಾಂಗ್ರೆಸ್ ಮಹಿಳಾ ವಿರೋಧಿ ಧೋರಣೆಗಳು ಅರ್ಥವಾಗಿವೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಿದ್ದುಹೋದಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ವಿಕೃತವಾಗಿ ನಕ್ಕು ಸಂಭ್ರಮಿಸಿದ್ದು ದೇಶದ 70 ಕೋಟಿ ಮಹಿಳೆಯರನ್ನು ಅಣಕಿಸಿದಂತೆ ಆಗಿತ್ತು. ತಾನೂ ಒಬ್ಬ ಮಹಿಳೆಯಾಗಿ ಮಹಿಳೆಯರಿಗೆ ಅಧಿಕಾರ ನೀಡಬೇಕು ಎಂಬುದು ಅವರಿಗೆ ಬೇಕಾಗಿಲ್ಲ. ಇದು ಕಾಂಗ್ರೆಸ್‌ನವರ ಮಹಿಳಾ ನೀತಿ ಎಂದು ಟೀಕಿಸಿದರು.ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಮಹಿಳೆಯರ ಬಗ್ಗೆ ಬಾಯಿಮಾತಿನಲ್ಲಿ ಕಾಳಜಿ ತೋರಿಸುವ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಗೌರವವೂ ಇಲ್ಲ, ಮಹಿಳೆಯರಿಗೆ ರಾಜಕೀಯ ಅಧಿಕಾರ ಕೊಡಬೇಕೆಂಬ ಇಚ್ಛಾಶಕ್ತಿ ಕಾಂಗ್ರೆಸ್‌ನವರಿಗಿಲ್ಲ. ಇದರ ಫಲವನ್ನು ಅವರು ಅನುಭವಿಸುತ್ತಾರೆ ಎಂದರು.ತಿಪಟೂರಿನ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿದರು. ಮುಖಂಡರಾದ ಗುಬ್ಬಿ ನಾಗರಾಜು, ಕೊರಟಗೆರೆ ಅಧ್ಯಕ್ಷ ಕಾಮರಾಜು, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್. ನಾಗರಾಜು, ನಗರಸಭೆ ಮಾಜಿ ಅಧ್ಯಕ್ಷ ಟಿ.ಎಚ್. ಜಯರಾಮ್, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್‌ಪ್ರಸಾದ್, ಮಾಜಿ ಸದಸ್ಯರಾದ ಟಿ.ಜಿ.ನರಸಿಂಹರಾಜು, ಮೋಹನ್‌ಕುಮಾರ್, ಟಿ.ಎ.ಬಾಲಕೃಷ್ಣ, ಹೆಚ್.ಆರ್.ಹನುಂತರಾಯಪ್ಪ, ಧರಣೇಂದ್ರಕುಮಾರ್, ಟಿ.ಹೆಚ್.ಬಾಲಕೃಷ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ನಾಗವಲ್ಲಿ ರಾಮು, ಯೋಗಾನಂದಕುಮಾರ್, ಕಳ್ಳಿಪಾಳ್ಯ ಲೋಕೇಶ್, ಹೆಬ್ಬೂರು ಗೋವಿಂದಪ್ಪ, ಲಕ್ಷ್ಮೀನರಸಿಂಹಯ್ಯ, ತಿಮ್ಮಾರೆಡ್ಡಿ, ಗೂಳೂರು ನವೀನ್, ರೇಖಾ ರಾಜ್, ಭೈರೇಶ್, ಗಂಗಣ್ಣ, ತಾಹೇರಾ ಕುಲ್ಸಂ, ಲೀಲಾವತಿ, ಲಕ್ಷ್ಮೀ ನಾಯಕ್, ತ್ರಿವೇಣಿ, ವಿಜಯ್‌ಗೌಡ, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ್, ಮಂಜುನಾಥ್ ಸೇರಿದಂತೆ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣದ ಹೆಸರಿನಲ್ಲಿ ಮಹಿಳೆಯರಿಗೆ ಅನ್ಯಾಯ: ಶುಭದಾಯಿನಿ
ಕಾಂಗ್ರೆಸ್‌ನ ಅಸಲಿ ಮುಖ ಬಯಲು: ಡಾ.ಸಿ.ಎನ್.ಅಶ್ವತ್ಥನಾರಾಯಣ