ಕನ್ನಡಪ್ರಭ ವಾರ್ತೆ ಚಾಮರಾಜನಗರಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಬರ ಪರಿಹಾರ ನೆರವು ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಕೆಪಿಸಿಸಿ ಅದೇಶದ ಮೇರೆಗೆ ಹೋರಾಟ ಮಾಡುವುದಾಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಒತ್ತಾಯದ ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್ ಅದೇಶದ ಮೇರೆಗೆ ರಾಜ್ಯಕ್ಕೆ ಬರ ಪರಿಹಾರ ಅನುದಾನವಾಗಿ೩,೪೫೬ ಕೋಟಿ ರು.ಗಳನ್ನು ನೀಡಿದೆ. ಇದರಿಂದ ಆನೆ ಹೊಟ್ಟೆಗೆ ಆರುಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಾದ ಬರ ಪರಿಹಾರವನ್ನು ನೀಡಲಿಲ್ಲ. ಅಕ್ಟೋಬರ್‌ನಲ್ಲಿಯೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ದೆಹಲಿಗೆ ತೆರಳಿ ಖುದ್ದು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ೧೨,೧೭೧ ಕೋಟಿ ರು. ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರು. ಅದರೆ ಇದುವರೆಗೆ ಕೇಂದ್ರ ಸರ್ಕಾರ ಸ್ಪಂದನೆ ನೀಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣವನ್ನು ಕೊಡಿಸುವಂತೆ ಸುಪ್ರಿಂಕೋರ್ಟ್ ಮೊರೆ ಹೋದ ಪರಿಣಾಮ ಈಗ ಅಂದರೆ ೫ ತಿಂಗಳ ನಂತರ ಕೇವಲ ೩, ೪೫೬ ಕೋಟಿ ರು. ಬಿಡುಗಡೆಯಾಗಿದೆ. ರಾಜ್ಯದಲ್ಲಿ ಮಳೆಯಿಲ್ಲದೇ ಭೀಕರವಾದ ಬರಗಾಲ ಕಾಡುತ್ತಿದೆ. ರಾಜ್ಯದ ಜಲಾಶಯಗಳು ನೀರಿನ ಅಭಾವ ಸೃಷ್ಟಿಯಾಗಿದೆ. ಅಂತರ್ ಜಲ ಕುಸಿದೆ. ಕುಡಿಯುವ ನೀರಿಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಾತ್ವಾರ ಉಂಟಾಗಿದೆ. ಜನಜಾನುವಾರುಗಳಿಗೆ ಮೇವು, ನೀರಿನ ಕೊರತೆ ಇದೆ. ಇದರಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ.ಕೂಡಲೇ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕೆಪಿಸಿಸಿ ಆದೇಶದಂತೆ ಜಿಲ್ಲಾದ್ಯಂತ ಬಿಜೆಪಿ ಸರ್ಕಾರ ವಿರುದ್ದ ಪ್ರತಿಭಟನೆ ಮಾಡುವುದಾಗಿ ನವೀನ್ ತಿಳಿಸಿದರು.
ಬಹುಮತದಿಂದ ಬೋಸ್ ಗೆಲುವು:ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪರಿಣಾಮ ಈ ಬಾರಿ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪರವಾಗಿ ಹೆಚ್ಚಿನ ಒಲವು ಹೊಂದಿದ್ದರು. ಲೋಕಸಭೆಯ ೧೪ ಕ್ಷೇತ್ರಗಳಿಗೆ ನಡೆದ ರಾಜ್ಯದ ಮೊದಲ ಹಂತದ ಮತದಾನದಲ್ಲಿ ಕಾಂಗ್ರೆಸ್ ಪಕ್ಷ ೧೦ಕ್ಕು ಹೆಚ್ಚು ಕ್ಷೇತ್ರಗಳಲ್ಲಿ ಜಯಬೇರಿ ಭಾರಿಸಲಿದೆ. ಚಾಮರಾಜನಗರ ಕ್ಷೇತ್ರ ಸೇರಿದಂತೆ ದಕ್ಷಿಣ ಕರ್ನಾಟಕದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಪಂಡ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಪದ್ಮ ಪುರುಷೋತ್ತಮ್, ಜಿಪಂ ಮಾಜಿ ಸದಸ್ಯ ರಮೇಶ್, ಮುಖಂಡರಾದ ಕರಿನಂಜನಪುರ ಸ್ವಾಮಿ, ಶ್ರಿಕಾಂತ್, ಸೈಯದ್ ತೌಸಿಪ್ ಇದ್ದರು.