ಕ್ರೀಡೆ ಇಲ್ಲದೇ ಕೊಡಗು ಇಲ್ಲ. ಯಾವುದೇ ಕ್ರೀಡೆಗಾಗಲಿ ಪ್ರೋತ್ಸಾಹ ಅಗತ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕ್ರೀಡೆ ಇಲ್ಲದೆ ಕೊಡಗು ಇಲ್ಲ. ಕ್ರೀಡೆಯನ್ನು ಉತ್ತೇಜಿಸಲು ರಾಜಕೀಯವಾಗಿ, ಆರ್ಥಿಕವಾಗಿ ಎಲ್ಲರೂ ಕೈಜೋಡಿಸಬೇಕು. ಯಾವುದೇ ಕ್ರೀಡೆ ಆಗಲಿ ಪ್ರೋತ್ಸಾಹ ಅಗತ್ಯ. ಹಾಕಿ ಅಕಾಡೆಮಿಗೆ ತೋರದಲ್ಲಿ ಐದು ಎಕರೆ ಜಾಗವನ್ನು ನೀಡುವ ವ್ಯವಸ್ಥೆ ಆಗುತ್ತಿದೆ. ಮಕ್ಕಳ ಪ್ರತಿಭೆಗೆ ಅವಕಾಶ ಸಿಗುವಂತಾಗಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೌಟುಂಬಿಕ ಹಾಕಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಅವರು ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಫೈನಲ್ ಪಂದ್ಯದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, 32 ಮಹಿಳಾ ಆಟಗಾರರು ಸೇರಿದಂತೆ ಐದು ವರ್ಷದ ಬಾಲಕ, 90 ವರ್ಷದ ಹಿರಿಯ ಕೌಟುಂಬಿಕ ಹಾಕಿಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷ 25ನೇ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಹಬ್ಬ ಮುದ್ದಂಡ ಕುಟುಂಬಸ್ಥರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ನಡೆಯಲಿದೆ. ಇದು ಮತ್ತಷ್ಟು ವೈಭವಪೂರ್ಣವಾಗಿ ನಡೆಯಬೇಕು ಎಂದರು.
ಐಆರ್‌ಎಸ್ ಜಾರಿನಿರ್ದೇಶನಾಲಯದ ಉಪನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ ಮಾತನಾಡಿ, ಕೊಡವರ ಒಗ್ಗಟು ಪರಿಶ್ರಮದ ಫಲ ಈ ಕ್ರೀಡಾಕೂಟ. ಕೊಡವ ಜನಾಂಗದವರ ಆರೋಗ್ಯ, ದೈಹಿಕ ಕ್ಷಮತೆ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರು ಆರೋಗ್ಯ ವೃದ್ಧಿಯತ್ತ ಗಮನಹರಿಸಬೇಕು ಎಂದರು.ಸಭಾ ಕಾರ್ಯಕ್ರಮದಲ್ಲಿ ಹೈದರಾಬಾದ್ ವಿದೇಸಿ ತನಿಖಾ ಘಟಕದ ಉಪನಿರ್ದೇಶಕ ಮುಕ್ಕಾಟಿರ ಪುನೀತ್ ಕುಟ್ಟಯ್ಯ, ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಪುಚ್ಚಿ ಮಾಡ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟರಾಜ ಪಾಲ್ಗೊಂಡಿದ್ದರು.
ಹಾಕಿ ಪಂದ್ಯಾವಳಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಯಾರಿಯರ್ ಗೈಡೆನ್ಸ್, ಫುಡ್ ಫೆಸ್ಟಿವಲ್, ಉಚಿತ ಆರೋಗ್ಯ ಕ್ಯಾಂಪ್, ಫ್ಯಾಮಿಲಿ ಮ್ಯಾರಾಥಾನ್, ಬೊಳಕಾಟ್ ತರಬೇತಿ, ಸಾಧಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಅಪ್ಪಚೆಟ್ಟೋಳಂಡ ಕುಟುಂಬಸ್ಥರು 5 ಲಕ್ಷ ರು.ಗಳ ಚೆಕ್ ಅನ್ನು ಹಾಕಿ ಅಕಾಡೆಮಿಗೆ ಹಸ್ತಾಂತರಿಸಿದರು.
ಲೇಖಕ ಅಲ್ಲಾರಂಡ ವಿಠಲ್ ನಂಜಪ್ಪ, ಕುಂಡ್ಯೋಳಂಡ ಕುಟುಂಬದ ಕುರಿತು ಬರೆದ ಪುಸ್ತಕವನ್ನು ಈ ಸಂದರ್ಭ ಲೋಕಾರ್ಪಣೆಗೊಳಿಸಲಾಯಿತು. ಕೊಡವ ಹಾಕಿ ಅಕಾಡೆಮಿಗೆ 5 ಎಕ್ರೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಹಾಗೂ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕುಂಡ್ಯೋಳಂಡ ಕುಟುಂಬಸ್ಥರಿಗೆ ಒಡಿಕತ್ತಿಯನ್ನು ನೀಡುವುದರ ಮೂಲಕ ಹಾಕಿ ಅಕಾಡೆಮಿಯಿಂದ ಗೌರವ ಸಲ್ಲಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.