ಯಕ್ಷಗಾನ ಕೇಂದ್ರ ನಡೆಸುವುದು ಸಾಹಸ ಕಾರ್ಯ: ಎ.ಪಿ. ಫಾಟಕ್

KannadaprabhaNewsNetwork | Published : Apr 29, 2024 1:34 AM

ಸಾರಾಂಶ

ಸುಬ್ರಹ್ಮಣ್ಯ ಧಾರೇಶ್ವರರು ಆಗಿನ ಕಾಲದಲ್ಲಿ ಡೇರೆ ಮೇಳದ ಏಳಿಗೆಗೆ ಅನುಕೂಲವಾಗುವ ಹಾಗೆ ಅನೇಕ ಹೊಸ ಪ್ರಸಂಗಗಳನ್ನು ಆಡಿಸಿ ಗೆದ್ದವರು. ಇದೀಗ ಅವರ ನಿಧನದಿಂದ ಒಂದು ನಿರ್ವಾತ ಸೃಷ್ಟಿಯಾಗಿದೆ ಎಂದು ಖ್ಯಾತ ಮದ್ದಲೆ ವಾದಕ, ಗುರು ಎ.ಪಿ. ಫಾಟಕ್ ತಿಳಿಸಿದರು.

ಯಲ್ಲಾಪುರ: ಯಕ್ಷಗಾನ ಕಲಿಕಾ ಕೇಂದ್ರಗಳು ಮೊದಲಿಗೆ ಆರಂಭಗೊಂಡಿದ್ದೇ ಡಾ. ಶಿವರಾಮ ಕಾರಂತರಿಂದ. ಕಾಲಕ್ರಮೇಣ ಹಲವು ಪ್ರದೇಶಗಳಲ್ಲಿ ಇಂತಹ ಕಲಿಕಾ ಕೇಂದ್ರಗಳು ಆರಂಭಗೊಂಡವು. ಉಡುಪಿಯ ಕಲಾರಂಗದ ಯಕ್ಷಶಿಕ್ಷಣ ಟ್ರಸ್ಟ್‌ನ ಮೂಲಕ ಕೇಂದ್ರ ಪ್ರಸಿದ್ಧವಾಗಿದೆ. ಯಕ್ಷಗಾನ ಕಲಿಸುವಿಕೆಯಲ್ಲಿ ೧೯ ವರ್ಷಗಳಿಂದ ಆನಗೋಡ ಯಕ್ಷಗಾನ ಕಲಾಮಿತ್ರ ಮಂಡಳಿ ತೊಡಗಿಸಿಕೊಂಡಿರುವುದು ಸಾಹಸದ ಕಾರ್ಯವೇ ಆಗಿದೆ ಎಂದು ಖ್ಯಾತ ಮದ್ದಲೆ ವಾದಕ, ಗುರು ಎ.ಪಿ. ಫಾಟಕ್ ಹೇಳಿದರು.

ಶುಕ್ರವಾರ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಥಳೀಯ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟಿನ ೧೯ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಸುಬ್ರಹ್ಮಣ್ಯ ಧಾರೇಶ್ವರರು ಆಗಿನ ಕಾಲದಲ್ಲಿ ಡೇರೆ ಮೇಳದ ಏಳಿಗೆಗೆ ಅನುಕೂಲವಾಗುವ ಹಾಗೆ ಅನೇಕ ಹೊಸ ಪ್ರಸಂಗಗಳನ್ನು ಆಡಿಸಿ ಗೆದ್ದವರು. ಇದೀಗ ಅವರ ನಿಧನದಿಂದ ಒಂದು ನಿರ್ವಾತ ಸೃಷ್ಟಿಯಾಗಿದೆ. ಕೆರೆಮನೆ ಕೇಂದ್ರದಲ್ಲಿ ಸರಿಯಾಗಿ ಕಲಿತು ಶಂಭು ಹೆಗಡೆಯವರ ಪ್ರೀತಿಯ ಕಲಾವಿದರಾಗಿ ರೂಪುಗೊಂಡ ಅನಂತ ದಂತಳಿಗೆ ಹಾಗೂ ಸದಾಶಿವ ಮಲವಳ್ಳಿಯವರ ಗುರುತ್ವದಲ್ಲಿ ತರಬೇತಿ ಕೇಂದ್ರ ನಡೆಸುತ್ತಿರುವ ಈ ಸಂಸ್ಥೆ ಇನ್ನೂ ಸುದೀರ್ಘ ಕಾಲ ಯಕ್ಷಗಾನದ ಸೇವೆ ನಡೆಸುವಂತಾಗಲಿ ಎಂದು ಆಶಿಸಿದರು.

ತಾಳಮದ್ದಲೆ ಅರ್ಥಧಾರಿ ಡಾ. ಮಹೇಶ ಭಟ್ಟ ಮಾತನಾಡಿ, ಯಕ್ಷಗಾನ ಹಳೆಯ ಕಾಲದಲ್ಲಿ ಆರ್ಥಿಕವಾಗಿ ದುರ್ಬಲವಾಗಿದ್ದರೂ ಕಲೆಯ ದೃಷ್ಟಿಯಿಂದ ಶ್ರೀಮಂತವಾಗಿತ್ತು. ಇಂದು ಯಕ್ಷಗಾನದಲ್ಲಿ ಆರ್ಥಿಕತೆ ಸುಧಾರಿಸಿದೆಯಾದರೂ, ಯಕ್ಷಗಾನದ ನೈಪುಣ್ಯತೆ ಕ್ಷೀಣಿಸುತ್ತಿದೆ ಎಂದ ಅವರು, ಇಂತಹ ಯಕ್ಷಗಾನ ಕಲಿಕಾ ಕೇಂದ್ರಗಳು ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಯಕ್ಷಶಿಕ್ಷಣ ನೀಡುತ್ತಿವೆ. ಇಲ್ಲಿ ನೈಪುಣ್ಯತೆ ಕಲಿಸಲ್ಪಡುತ್ತದೆ ಎಂಬ ವಿಶ್ವಾಸ ನನ್ನದಾಗಿದೆ ಎಂದರು.

ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಮಳಗಿಮನೆ ಸುಬ್ರಾಯ ಹೆಗಡೆಯವರು ತಮಗೆಷ್ಟೇ ಕಷ್ಟವಿದ್ದರೂ ಮಕ್ಕಳಿಗಾಗಿ ಯಕ್ಷಗಾನ ಕೇಂದ್ರ ನಡೆಸುತ್ತಿರುವುದು ಶ್ಲಾಘನೀಯ. ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ಕಲೆಯ ಪಾತ್ರ ದೊಡ್ಡದು. ಯಕ್ಷಗಾನದ ಮೂಲಕ ಸಂಸ್ಕಾರ ನೀಡಬಹುದಾಗಿದೆ ಎಂದರು.

ಸುದರ್ಶನ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಮಾನಿಗದ್ದೆ ಉಪಸ್ಥಿತರಿದ್ದರು. ಸುಬ್ರಾಯ ಹೆಗಡೆ ಮಳಗಿಮನೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕೇಂದ್ರದ ಗುರುಗಳಾದ ಅನಂತ ದಂತಳಿಗೆ, ಸದಾಶಿವ ಮಲವಳ್ಳಿ, ಕೃಷ್ಣ ಹೆಗಡೆ ಕಲಾಗುರು ಎ.ಪಿ. ಫಾಟಕ್ ಅವರಿಗೆ ಗೌರವ ಸಮರ್ಪಿಸಿದರು. ಡಾ. ಡಿ.ಕೆ. ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಶ್ರೀಧರ ಹೆಗಡೆ ಸ್ವಾಗತಿಸಿದರು. ಕೇಂದ್ರದ ಮಕ್ಕಳಿಂದ ಯಕ್ಷಗಾನ ಪೂರ್ವರಂಗ ಹಾಗೂ ಜಾಂಬವತಿ ಕಲ್ಯಾಣ ಆಖ್ಯಾನ ಪ್ರದರ್ಶಿಸಲ್ಪಟ್ಟಿತು.

Share this article