ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬಿಜೆಪಿ ಮುಖಂಡರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಬೆಂಗಳೂರಿನಲ್ಲಿ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ₹ ೪೨ ಕೋಟಿ ನಗದು ಸಿಕ್ಕಿದೆ. ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಣವನ್ನು ಪಂಚರಾಜ್ಯ ಚುನಾವಣೆಗೆ ಬಳಸಿಕೊಳ್ಳಲು ಕಾಂಗ್ರೆಸ್ ಯೋಜನೆ ರೂಪಿಸಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಶೇ. ೪೦ರಷ್ಟು ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ಸಿಗೆ ಈ ವರೆಗೂ ಸಾಕ್ಷಿ, ಆಧಾರ ಒದಗಿಸಲು ಸಾಧ್ಯವಾಗಿಲ್ಲ. ದಸರಾ ಹಬ್ಬದ ಕಾರ್ಯಕ್ರಮ ನೀಡಲು ಬರುವ ಕಲಾವಿದರ ಬಳಿಯೂ ಕಮಿಷನ್ ಕೇಳಿದ್ದಾರೆ ಎಂದರೆ ಸರ್ಕಾರ ಎಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುವುದು ತಿಳಿಯುತ್ತದೆ ಎಂದು ವಾದ್ದಾಳಿ ನಡೆಸಿದರು. ಜಿಲ್ಲಾ ವಕ್ತಾರ ನಾಗರಾಜ ನಾಯಕ ಮಾತನಾಡಿ, ಮಟ್ಕಾ, ಜೂಜು, ಅಕ್ರಮ ಮರಳು ಸಾಗಾಟ, ಮಾರಾಟ, ಅಕ್ರಮ ಗಣಿಗಾರಿಕೆ ಇವೆಲ್ಲ ಕಾರವಾರ ಕ್ಷೇತ್ರದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಅಧಿಕಾರಿಗಳು ಲಂಚ ನೀಡದೇ ವರ್ಗಾವಣೆ ಆಗುತ್ತಿಲ್ಲ ಎಂದು ದೂರಿದ ಅವರು, ಅಂಬಿಕಾಪತಿ ಮನೆಯಲ್ಲಿ ಸಿಕ್ಕ ₹ ೪೨ ಕೋಟಿ ವಿವಿಧ ಇಲಾಖೆಯಿಂದ ಅಕ್ರಮವಾಗಿ ಸಂಗ್ರಹಿಸಿದ ಹಣವಾಗಿದೆ. ಬಡವರ ರಕ್ತ ಹೀರಿದ ಹಣವಾಗಿದೆ ಎಂದು ಕಿಡಿಕಾರಿದರು. ೧ ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನ್ಯಾಯವಾದಿ ಸಂಜಯ ಸಾಳುಂಕೆ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಸ್ ಗುನಗಿ, ನಗರ ಅಧ್ಯಕ್ಷ ನಗೇಶ ಕುರ್ಡೇಕರ ಮೊದಲಾದವರು ಇದ್ದರು. ಡಿಸಿ ಬರಲು ಆಗ್ರಹ ಬಿಜೆಪಿಗರ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಆಗಮಿಸಿದರು. ಆದರೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಒಳಗೊಂಡು ಮುಖಂಡರು ಜಿಲ್ಲಾಧಿಕಾರಿಯೇ ಮನವಿ ಸ್ವೀಕರಿಸಲು ಆಗ್ರಹಿಸಿದರು. ಡಿಸಿ ಗಂಗೂಬಾಯಿ ಮಾನಕರ ಸಭೆಯಲ್ಲಿ ಇರುವುದಾಗಿ ಎಡಿಸಿ ತಿಳಿಸಿದಾಗ ಕಾಯುತ್ತೇವೆ ಅವರೇ ಬರಲಿ ಎಂದರು. ಕೆಲಹೊತ್ತಿನ ಬಳಿಕ ಡಿಸಿ ಆಗಮಿಸಿ ಮನವಿ ಸ್ವೀಕರಿಸಿದರು.