ಮೊಸಳೆ ಕಣ್ಣೀರು ಹಾಕಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಿಂದಾಗಿ ರಾವಣ ರಾಜ್ಯ ಸೃಷ್ಟಿ : ಬಿವೈವಿ

KannadaprabhaNewsNetwork |  
Published : Apr 09, 2025, 12:30 AM ISTUpdated : Apr 09, 2025, 10:57 AM IST
ಬಿಜೆಪಿ ಜನಾಕ್ರೋಶ | Kannada Prabha

ಸಾರಾಂಶ

ಮೊಸಳೆ ಕಣ್ಣೀರು ಹಾಕಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಕಾಂಗ್ರೆಸ್‌ನಿಂದಾಗಿ ಕರ್ನಾಟಕ ಇಂದು ರಾವಣ ರಾಜ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

 ಮಂಡ್ಯ : ಮೊಸಳೆ ಕಣ್ಣೀರು ಹಾಕಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಕಾಂಗ್ರೆಸ್‌ನಿಂದಾಗಿ ಕರ್ನಾಟಕ ಇಂದು ರಾವಣ ರಾಜ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ, ಮುಸ್ಲಿಮರ ಓಲೈಕೆ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಇದರಂಗವಾಗಿ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಯಿತು. ಇದೇ ಮೊದಲ ಬಾರಿಗೆ ಮಾಜಿ ಸಂಸದೆ ಸುಮಲತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಹಿಂದುಳಿದ ಸಮುದಾಯಗಳ ಮತಗಳಿಂದ ರಾಜಕೀಯವಾಗಿ ಬೆಳವಣಿಗೆ ಸಾಧಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಸಿದ್ದರಾಮಯ್ಯ ಅವರು ಈಗ ಕೇವಲ ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಆದರದು ಕಂಪನಿಗಳಿಗೆ ಮಾತ್ರ, ಜನಸಾಮಾನ್ಯರಿಗೆ ಅಲ್ಲ. ಆದರೆ, ರಾಜ್ಯ ಸರ್ಕಾರ 50 ರಿಂದ 70 ವಸ್ತುಗಳ ಬೆಲೆ ಏರಿಕೆ ಮಾಡಿದೆ. ಈಗ ಯಾರಿಗೆ ಕಪಾಳಮೋಕ್ಷ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.

ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ನಿಮ್ಮ ಸರ್ಕಾರ ಎಲ್ಲ ವಸ್ತುಗಳ ಮೇಲೂ ತೆರಿಗೆ ಹಾಕಿ ಸುಲಿಗೆ ಮಾಡಲು ಹೊರಟಿದೆ. ನಿಮ್ಮ ಈ ಕಾರ್ಯವನ್ನು ಜನತೆ ಹಾದಿ-ಬೀದಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ಮುಂದೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದ್ದರು. ಆದರೆ, ನೀವು ರೈತರ ಜೊತೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದೀರಿ. ರಾತ್ರಿ 12 ಅಥವಾ 2 ಗಂಟೆಗೆ ಪಂಪ್‌ಸೆಟ್‌ಗಳಿಗೆ ಕರೆಂಟ್ ಕೊಟ್ಟು ಹೊಲದಲ್ಲಿ ಸರಿರಾತ್ರಿ ಹೊತ್ತಿನಲ್ಲಿ ರೈತ ನಿಲ್ಲುವಂತೆ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಿಂದೂಗಳ ಅಂಗಡಿಗಳಿಗೆ ನುಗ್ಗಿ ಬೆಂಕಿ ಹಚ್ಚುತ್ತಾರೆ. ಅಂತಹ ಕಿಡಿಗೇಡಿಗಳನ್ನು ಜೈಲಿಗೆ ಕಳುಹಿಸದೆ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ವಿ.ಸಿ.ನಾಲೆ ದುರಸ್ತಿ ನೆಪದಲ್ಲಿ ಕಾಂಗ್ರೆಸ್ ಪುಡಾರಿಗಳು ಮನೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.

‘ದುರಸ್ತಿ ಮಾತ್ರ ನಡೆದಿಲ್ಲ. ಅಭಿವೃದ್ಧಿಯೂ ಇಲ್ಲ, ಭ್ರಷ್ಟಾಚಾರ ನಡೆಸುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಅವರಿಗೆ ನ್ಯಾಯಾಲಯದಿಂದ ಜಾಮೀನು ಕೊಡಿಸಿದರೂ ಪೊಲೀಸರನ್ನು ಬಿಟ್ಟು ದೌರ್ಜನ್ಯ ನಡೆಸಿದ್ದರಿಂದ ನಮ್ಮ ಕಾರ್ಯಕರ್ತ ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಈ ಸರ್ಕಾರ ಬೆಲೆ ಏರಿಕೆಯನ್ನು ವಾಪಸ್‌ ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?