ಎಸ್‌ಪಿಗೆ ಮನವಿ ಸಲ್ಲಿಕೆ । ಪೊಲೀಸ್ ಬಂಧನದ ವೇಳೆ ಮಾಧ್ಯಮಗಳಿಗೆ ಹೇಳಿಕೆ ಆರೋಪ । ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅಗ್ರಹ
ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ನಾಲ್ವರು ಸಚಿವರ ವಿರುದ್ಧ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿರುವ ಬಗ್ಗೆ ಕ್ರಮ ಕೈಗೊಂಡು ತನಿಖೆ ನಡೆಸುವಂತೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ಹಾಗೂ ಪಕ್ಷದ ಮುಖಂಡರಾದ ಬನವಾಸೆ ರಂಗಸ್ವಾಮಿ ಮಾತನಾಡಿ, ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ಪೆನ್‌ಡ್ರೈವ್ ವಿಚಾರಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿರುದ್ಧ ಇದೇ ಪೆನ್‌ಡ್ರೈವ್ ವಿಚಾರವಾಗಿ ಆರೋಪ ಮಾಡಿರುವ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ವಿರುದ್ಧ ಸಹ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಆರೋಪಿ ದೇವರಾಜೇಗೌಡ ಈಗಾಗಲೇ ದಸ್ತಗಿರಿ ಆಗಿದ್ದಾರೆ. ಮೂರು ದಿನಗಳ ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಬಳಿಕ ಕಳೆದ ಮೂರು ದಿನಗಳ ಹಿಂದೆ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಲು ದೇವರಾಜೇಗೌಡ ಅವರನ್ನು ಕರೆತಂದ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ನಾಲ್ವರು ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದರು.ಅಲ್ಲದೆ ೧೦೦ ಕೋಟಿ ರು. ಆಫರ್ ಕೊಟ್ಟಿದ್ದರು. ೫ ಕೋಟಿ ರು. ಅಡ್ವಾನ್ಸ್ ಆಗಿ ಕಳುಹಿಸಿದ್ದರು ಎಂದು ಮಾಡಿರುವ ಆರೋಪವು ಕೇವಲ ಕಲ್ಪಿತವಾದ ಮತ್ತು ಸೃಷ್ಟಿ ಮಾಡಿದ ಹೇಳಿಕೆಯಾಗಿದೆ. ಈ ರೀತಿ ಹೇಳಿಕೆ ನೀಡಲು ಈ ವ್ಯಕ್ತಿಗೆ ಪ್ರೇರಣೆ ನೀಡಿದವರು ಅಥವಾ ಆತನ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿರುವ ವ್ಯಕ್ತಿ ಯಾರು? ಇದರಲ್ಲಿ ಯಾರ ಕೈವಾಡ ಇದೆ ಎಂದು ತಿಳಿಯಬೇಕಿದೆ ಎಂದು ಒತ್ತಾಯಿಸಿದರು.
ಸುಳ್ಳು ಹೇಳಿಕೆಗಳನ್ನು ಹೇಳುವ ಮೂಲಕ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಈ ವ್ಯಕ್ತಿಯನ್ನು ಬ್ರೈನ್ ಮ್ಯಾಪಿಂಗ್ ಮಾಡುವ ಮೂಲಕ ಸತ್ಯಾಂಶ ತಿಳಿಯಬೇಕು. ಮಾಧ್ಯಮಗಳಿಗೆ ಹೇಳಿಕೆ ನೀಡಲು ಅನುವು ಮಾಡಿಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಕೂಡ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು ಎಂದರು.