ಬಿಜೆಪಿ ಮುಖಂಡರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಕಾಂಗ್ರೆಸ್‌ ಆಗ್ರಹ

KannadaprabhaNewsNetwork | Published : May 9, 2024 12:45 AM

ಸಾರಾಂಶ

ಇದು ಬಿಜೆಪಿ- ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಪ್ರಜ್ವಲ್ ರೇವಣ್ಣ ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಸುಮ್ಮನಿದ್ದ ಬಿಜೆಪಿಯವರು ದೇವರಾಜೇಗೌಡ ಹೇಳಿಕೆ ಬಳಿಕ ಜಾಗೃತರಾಗಿದ್ದಾರೆ. ಮೊದಲು ದೇವರಾಜೇಗೌಡನನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ಆರ್.ಅಶೋಕ್, ವಿಜಯೇಂದ್ರ, ಪ್ರೀತಂ ಗೌಡ ಮತ್ತು ದೇವರಾಜೇಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ. ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿದೆ. ಈ ಪ್ರಕರಣವನ್ನ ಆರ್. ಅಶೋಕ್ ಸೇರಿದಂತೆ ಹಲವರು ಡಿ.ಕೆ. ಶಿವಕುಮಾರ್ ಮೇಲೆ ಹೊರಿಸುತ್ತಿದ್ದಾರೆ ಎಂದು ದೂರಿದರು.

ಇದು ಬಿಜೆಪಿ- ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಸುಮ್ಮನಿದ್ದ ಬಿಜೆಪಿಯವರು ದೇವರಾಜೇಗೌಡ ಹೇಳಿಕೆ ಬಳಿಕ ಜಾಗೃತರಾಗಿದ್ದಾರೆ. ಮೊದಲು ದೇವರಾಜೇಗೌಡನನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದರು.

ವೀಡಿಯೋ ಮಾಡಿದ್ದು ಪ್ರಜ್ವಲ್ ರೇವಣ್ಣ. ವಿಡಿಯೋ ತಕೊಂಡಿದ್ದು ಕಾರ್ತಿಕ್, ದೇವರಾಜೇಗೌಡ ಮೂಲಕ ವಿಡಿಯೋ ಬಿಡುಗಡೆ ಆಗಿದೆ. ಇದರ ನಡುವೆ ಡಿ.ಕೆ. ಶಿವಕುಮಾರ್ ಪಾತ್ರ ಏನಿದೆ? ಎಂದು ಪ್ರಶ್ನಿಸಿದರು.

ಡಿ. 23 ರಂದು ವಿಜಯೇಂದ್ರ ಮೂಲಕ ಬಿಜೆಪಿ ಹೈಕಮಾಂಡ್ ಗೆ ಪೆನ್ ಡ್ರೈವ್ ತಲುಪಿತ್ತು. ಆಗ ಅಭ್ಯರ್ಥಿ ಬದಲಾವಣೆ ಮಾಡಬೇಕು ಎಂದು ಹೇಳಿದ್ರೋ ಇಲ್ಲವೋ?. ಈಗಿದ್ದರೂ ಕೂಡ ನೀವು ಪ್ರಜ್ವಲ್ ಕೈಮೇಲೆತ್ತಿ ಪ್ರಚಾರ ಮಾಡಿದ್ದೀರಿ. ಮೈಸೂರಲ್ಲಿ ಮೋದಿಯವರು ಪ್ರಜ್ವಲ್ ಪರ ಪ್ರಚಾರ ಮಾಡಿದರು. ಇದೇನಾ ನಿಮ್ಮ ನೈತಿಕತೆ ಎಂದು ಪ್ರಶ್ನಿಸಿದರು.

ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನತೀತ ನಾಯಕ. ಇಂತಹ ನಾಯಕರ ಮಕ್ಕಳು, ಮೊಮ್ಮಕ್ಕಳಾಗಿ ನೀವು ಮಾಡುತ್ತಿರುವ ಕೆಲಸ ಏನು? ಇಳಿ ವಯಸ್ಸಿನಲ್ಲಿ ದೇವೇಗೌಡರಿಗೆ ನೋವುಂಟು ಮಾಡ್ತಿದ್ದೀರಲ್ಲ ಸರಿನಾ? ಒಕ್ಕಲಿಗ ಸಮುದಾಯದ ರಕ್ಷಣೆ ಮಾಡ್ತೀವಿ ಅಂತೀರಾ. ಒಕ್ಕಲಿಗ ಸಮುದಾಯದ ಹೆಣ್ಮಕ್ಕಳು ಆ ವಿಡಿಯೋದಲ್ಲಿ ಇದ್ದಾರಲ್ಲ ಇದಕ್ಕೇನು ಹೇಳುತ್ತೀರ ಎಂದರು.

ಎಸ್ಐಟಿ ಮೇಲೆ ನಿಮಗೆ ನಂಬಿಕೆ ಇಲ್ಲ ಅಂದ್ರೆ ಸಿಬಿಐ, ಎನ್ಐಎ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ಪ್ರಕರಣ ವಹಿಸಿ. ಬಿಜೆಪಿ- ಜೆಡಿಎಸ್ ನೀವು ಮೈತ್ರಿ ಮಾಡಿಕೊಂಡಿದ್ದೀರಲ್ಲ ನೀವೇ ಸಿಬಿಐ ಗೆ ಈ ಪ್ರಕರಣ ವಹಿಸಿ ಎಂದು ಸವಾಲು ಹಾಕಿದರು.

ಪ್ರಜ್ವಲ್ ಸಿಗುವ ಮುನ್ನವೇ ತನಿಖೆ ಸರಿ ಇಲ್ಲ ಎಂದರೆ ಹೇಗೆ? ಮುಖ್ಯಮಂತ್ರಿಗಳು ಎಸ್ಐಟಿ ಅವರೊಂದಿಗೆ ಮಾತನಾಡುವುದು ಬೇಡವೇ? ಸುಳ್ಳು ಮಾಹಿತಿ ಹರಡಿಸಿ ಸರ್ಕಾರದ ಧಿಕ್ಕು ತಪ್ಪಿಸಬೇಡಿ. ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿರುವ ಕಾರಣಕ್ಕೆ ಅವರ ಮೇಲೆ ಆರೋಪಿಸಬೇಡಿ. ಡಿ.ಕೆ. ಶಿವಕುಮಾರ್, ದೇವರಾಜೇಗೌಡ ಅವರೊಂದಿಗೆ ಮಾತನಾಡಿದ್ದೇ ತಪ್ಪು ಎಂದು ಬಿಂಬಿಸಲಾಗಿದೆ. ಇಬ್ಬರ ಜಗಳದಲ್ಲಿ ಅಶೋಕ್ ಅವರು ಒಕ್ಕಲಿಗ ನಾಯಕನಾಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕುಮಾರಸ್ವಾಮಿ ಅವರು ತನಿಖೆಗೆ ಸಹಕರಿಸಬೇಕೆ ಹೊರತು ಸಮುದಾಯದ ಹೆಣ್ಣು ಮಕ್ಕಳ ಮಾನ ಹಾನಿ ಮಾಡಬಾರದು. ತನಿಖೆ ಆಗಿ ವರದಿ ಬಂದ ನಂತರ ಅದರ ಬಗ್ಗೆ ಮಾತನಾಡಿ, ಈಗಲೇ ಮಾತನಾಡಿ ಧಿಕ್ಕು ತಪ್ಪಿಸಬೇಡಿ. ಬಿಜೆಪಿಯ 68 ನಾಯಕರ ವಿರುದ್ಧ ಸೆಕ್ಸ್ ಸಿಡಿ ಇರುವ ಬಗ್ಗೆ ದೂರು ಇದೆ. ಅವರೆಲ್ಲರೂ ತಡೆಯಾಜ್ಞೆ ತಂದಿದ್ದಾರೆ. ರಾಜ್ಯದ 14 ನಾಯಕರ ವಿರುದ್ಧ ಕೂಡ ಈ ಆರೋಪ ಇದೆ. ಇದು ಬಿಜೆಪಿ ಅವರ ಛಾಳಿ ಆಗಿದೆ ಎಂದು ಅವರು ಕಿಡಿಕಾರಿದರು.

ದೇವೇಗೌಡರಿಗೆ ಈ ಕಳಂಕ ಅಂಟಿರುವ ಬಗ್ಗೆ ನಮಗೂ ನೋವಾಗಿದೆ. ಕುಮಾರಸ್ವಾಮಿ ಅವರೇ, ಪ್ರಜ್ವಲ್ ನಿಮ್ಮ ಅಣ್ಣನ ಮಗ ಎಂಬ ಕಾರಣಕ್ಕೆ ಏನು ಮಾಡಿದರೂ ಸರಿ ಎಂಬ ಮನಸ್ಥಿತಿ ಬಿಡಿ. ಕುಮಾರಸ್ವಾಮಿ, ಜೆಡಿಎಸ್ ಮುಖಂಡರೇ ಹಾಗೂ ಬಿಜೆಪಿ ಅವರೇ? ತಾವು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ಮಾಡಬೇಡಿ. ಇವರ ವಿರುದ್ಧ ಯಾರು ಮಾತನಾಡಬಾರದು, ಇವರು ಮಾತ್ರ ಎಲ್ಲರ ಬಗ್ಗೆ ಮಾತನಾಡಬಹುದು ಎಂಬುದು ಎಷ್ಟು ಸರಿ. ನಾವೂ ಕೂಡ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಿ ಎಂದು ಒತ್ತಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದಾರೆ.ಕೊಲೆ ಮಾಡಿದವರನ್ನು ಬಿಟ್ಟು ಕತ್ತಿ ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಕೇಳುತ್ತಿದ್ದಾರೆ. ಇದು ಯಾವ ನ್ಯಾಯ?

- ಎಂ. ಲಕ್ಷ್ಮಣ, ಕೆಪಿಸಿಸಿ ವಕ್ತಾರ.

Share this article