ಕಾಂಗ್ರೆಸ್‌ನಿಂದ ಮಾದಿಗ ಸಮುದಾಯಕ್ಕೆ ಅಧಿಕಾರ ವಂಚನೆ: ಹುಚ್ಚಯ್ಯ

KannadaprabhaNewsNetwork |  
Published : Sep 30, 2026, 01:30 AM IST
 | Kannada Prabha

ಸಾರಾಂಶ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯವನ್ನು ಮೂಲೆಗುಂಪು ಮಾಡುತ್ತಿದೆ. ಸರ್ಕಾರದ ಅನೇಕ ಅಧಿಕಾರಸ್ಥರು, ಕಾಣದ ಕೈಗಳು ಮಾದಿಗ ಮುಖಂಡರು ಅಧಿಕಾರಕ್ಕೆ ಬಾರದಂತೆ ವ್ಯವಸ್ಥಿತವಾಗಿ ವಂಚನೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಆಪಾದಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯವನ್ನು ಮೂಲೆಗುಂಪು ಮಾಡುತ್ತಿದೆ. ಸರ್ಕಾರದ ಅನೇಕ ಅಧಿಕಾರಸ್ಥರು, ಕಾಣದ ಕೈಗಳು ಮಾದಿಗ ಮುಖಂಡರು ಅಧಿಕಾರಕ್ಕೆ ಬಾರದಂತೆ ವ್ಯವಸ್ಥಿತವಾಗಿ ವಂಚನೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಆಪಾದಿಸಿದರು.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿರುವ ಮಾದಿಗ ಸಮಾಜದ ಮುಖಂಡರನ್ನು ಕೇವಲ ದುಡಿಯಲು ಮಾತ್ರ ಇಟ್ಟುಕೊಂಡು ಅಧಿಕಾರ ತಪ್ಪಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲೂ ಇದೇ ಬೆಳವಣಿಗೆ ಇದೆ. ಜಿಲ್ಲೆಯ ಕಾಂಗ್ರೆಸ್‌ಗೆ ದುಡಿಯುತ್ತಿರುವ ಅನೇಕ ನಾಯಕರಿಗೆ ಅಧಿಕಾರ ಸಿಗದಂತೆ ಜಿಲ್ಲಾ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ನೋಡಿಕೊಂಡಿದ್ದಾರೆ ಎಂದು ದೂರಿದರು.

ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಗಂಗಹನುಮಯ್ಯ, ಕೆಂಚಮಾರಯ್ಯ, ನರಸೀಯಪ್ಪ, ವಾಲೆ ಚಂದ್ರಯ್ಯ, ನಾರಾಯಣಮೂರ್ತಿ, ರಾಮಕೃಷ್ಣ, ಜಯಮೂರ್ತಿ, ಪಾವಗಡ ನರಸಪ್ಪ ಮೊದಲಾದವರಿಗೆ ಯಾವುದೇ ರಾಜಕೀಯ ಅಧಿಕಾರ ನೀಡಿಲ್ಲ. ಟೂಡಾ ಅಧ್ಯಕ್ಷ ಸ್ಥಾನ ಅಥವಾ ನಿಗಮ, ಮಂಡಳಿಗಳಲ್ಲಿ ಅವಕಾಶ ಕೊಡಬಹುದಿತ್ತು. ಆದರೆ ಕೊಟ್ಟಿಲ್ಲ. ಮಾದಿಗರು ಮಾತ್ರವಲ್ಲ, ಛಲವಾದಿಗಳಿಗೂ ಡಾ. ಪರಮೇಶ್ವರ್ ಅಧಿಕಾರ ನೀಡಿಲ್ಲ ಎಂದರು.

ವಾಮನನು ಬಲಿಚಕ್ರವರ್ತಿಯನ್ನು ತುಳಿಯುವಂತೆ ಡಾ. ಪರಮೇಶ್ವರ್ ಅವರು ವಾಮನನಾಗಿ ಮಾದಿಗ ಸಮಾಜದ ಮುಖಂಡರಿಗೆ ಅವಕಾಶ ಸಿಗದಂತೆ ತುಳಿಯುತ್ತಿದ್ದಾರೆ ಎಂದು ಟೀಕಿಸಿದ ಹುಚ್ಚಯ್ಯ, ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ಮಾದಿಗ ಸಮುದಾಯ ಮುಖಂಡರನ್ನು ಬಳಸಿಕೊಂಡು ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 30 ಸಾವಿರ ಮಾದಿಗ ಜನಾಂಗದ ಮತದಾರರಿದ್ದು, ಚುನಾವಣೆ ಫಲಿತಾಂಶದ ನಿರ್ಣಾಯಕರಾಗಿದ್ದಾರೆ. ಮಾದಿಗ ಸಮಾಜ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಹೆಚ್ಚು ಶಾಸಕರನ್ನು ಗೆಲ್ಲಿಸಲು ಪಕ್ಷದಲ್ಲಿರುವ ಮುಖಂಡರು ಶ್ರಮ ವಹಿಸಿದ್ದಾರೆ. ಮಾದಿಗ ಸಮುದಾಯದ ನಾಯಕರಿಗೆ ಯಾವುದೇ ಸ್ಥಾನಮಾನ ನೀಡದಂತೆ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಅನೇಕ ಬಾರಿ ತುಮಕೂರಿನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಮಾಡುವಂತೆ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಇತರೆ ಎಲ್ಲ ರಾಜ್ಯಮಟ್ಟದ ನಿಗಮ ಅಥವಾ ಮಂಡಳಿಯ ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಗಿ ನೇಮಿಸುವಂತೆ ಮಾದಿಗ ಸಮಾಜ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ಮಾಡುತ್ತಾ ಬಂದಿದೆ. ಆದರೆ ಉಪ ಮುಖ್ಯಮಂತ್ರಿ ಪರಮೇಶ್ವರ ಇದಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮಾದಿಗ ಸಮಾಜ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಎರಡು ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲೂ ಮಾದಿಗ ಸಮಾಜದ ನಾಯಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದೆ ಕಡೆಗಣಿಸಿದೆ. ಹೀಗೆ ಕಾಂಗ್ರೆಸ್ ಪಕ್ಷ ಸಮುದಾಯವನ್ನು ನಿರ್ಲಕ್ಷ ಮಾಡಿದರೆ ‘ಮಾದಿಗ ಮುಖಂಡರೇ ಕಾಂಗ್ರೆಸ್ ಬಿಟ್ಟು ಹೊರಬನ್ನಿ’ ಎಂಬ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾದರ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಡಾ. ಮುಕುಂದ್, ಖಜಾಂಚಿ ಗಂಗರಾಜು, ನಗರ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ರಾಜಣ್ಣ, ತುಮಕೂರು ಗ್ರಾಮಾಂತರ ಅಧ್ಯಕ್ಷ ಹೊಳಕಲ್ಲು ಆಂಜನಪ್ಪ, ಕಾರ್ಯದರ್ಶಿ ದಾಸಪ್ಪ, ಮುಖಂಡರಾದ ರಘು, ಸದಾಶಿವಯ್ಯ, ವರದಯ್ಯ, ಸತ್ಯಪ್ಪ, ಕೃಷ್ಣಪ್ಪ, ಅಶ್ವತ್ಥನಾರಾಯಣ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣವಾಗಿ ದಸರಾಗೆ ಅಗತ್ಯ ಕ್ರಮವಹಿಸಿ: ಜುಬಿನ್‌ ಮೊಹಾಪಾತ್ರ
ತಾಯಿ ಮಕ್ಕಳ ಆರೈಕೆ, ಗುಣಮಟ್ಟದ ಸೇವೆ ನಿಗಾವಹಿಸಿ: ಡಾ.ರಜನಿ ಎಂ