
ಕನ್ನಡಪ್ರಭ ವಾರ್ತೆ, ತುಮಕೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಉಪಾಧ್ಯಕ್ಷ ರಾಹುಲ್‌ಗಾಂಧಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ನಿರ್ದೇಶನದಂತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಗಿದೆ. ಆಗಸ್ಟ್ 14 ರವರೆಗೆ ಕಾರ್ಯಕರ್ತರು ಮುಕ್ತವಾಗಿ ಭೇಟಿಯಾಗಿ, ಇಲ್ಲವೇ ಪಕ್ಷ ತಂದಿರುವ ಅರ್ಜಿಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ ಎಂದರು.
ಸಂಘಟನ್ ಅಭಿಯಾನದ ಪ್ರಮುಖ ಉದ್ದೇಶ, ಇದುವರೆಗೂ ಜಿಲ್ಲಾಧ್ಯಕ್ಷರ ನೇಮಕಕ್ಕೆ ಇದ್ದ ಶಾಸಕರು, ಮಂತ್ರಿಗಳ ಶಿಫಾರಸ್ಸು ಹೊರತು ಪಡಿಸಿ,ಎಲ್ಲ ಕಾರ್ಯಕರ್ತರು, ಮುಖಂಡರುಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ, ಎಲ್ಲರಿಗೂ ಒಪ್ಪಿಗೆಯಾಗುವ ನಾಯಕನನ್ನು ಆಯ್ಕೆ ಮಾಡಬೇಕೆಂಬುದಾಗಿದೆ.ಹಾಗಾಗಿ ತಳಮಟ್ಟದಲ್ಲಿ ಕಾರ್ಯಕರ್ತರು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.ಇದುವರೆಗೂ 25 ಕ್ಕೂ ಹೆಚ್ಚು ಜನರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಐಸಿಸಿ ನಿಯಮಗಳ ಪ್ರಕಾರ ಪಕ್ಷದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಪಕ್ಷದಲ್ಲಿ ಕಾರ್ಯನಿರ್ವಹಿಸಬೇಕು.ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಬದ್ದವಾಗಿರುವ ವ್ಯಕ್ತಿಯಾಗಿರಬೇಕು. 55 ವರ್ಷಗಳ ಒಳಗಿರಬೇಕು. ಒಂದು ವೇಳೆ ವಯಸ್ಸು ಹೆಚ್ಚಾಗಿದ್ದರೂ ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರೆ ಅವಕಾಶ ಕಲ್ಪಿಸಬಹುದು. ಎಐಸಿಸಿ ನನಗೆ ವಹಿಸಿರುವ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಮಾಡಿ,ವರದಿ ಸಲ್ಲಿಸುತ್ತೇನೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಯಾರನ್ನು ನಿರ್ಲಕ್ಷಿಸಿಲ್ಲ. ನಾನು ಬರುವುದರ ಬಗ್ಗೆ ಜಿಲ್ಲಾಧ್ಯಕ್ಷರಿಗೆ ಮಾಹಿತಿ ಇತ್ತು. ಅವರು ಎಲ್ಲಾ ಮುಖಂಡರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.ಈಗಲೂ ಕಾಲಾವಕಾಶವಿದೆ. ಹಾಗಾಗಿ ತಮ್ಮ ಮನವಿ ಸಲ್ಲಿಸಬಹುದು. ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಕಾರ್ಯಕರ್ತರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಕ್ಕಿಲ್ಲ ಎಂಬ ಬೇಸರ ಇರುವುದು ನಮ್ಮ ಗಮನಕ್ಕೆ ಬಂದಿದೆ.ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರು, ಪದಾಧಿಕಾರಿಗಳ ಗಮನಕ್ಕೆ ತರುತ್ತೇನೆ.ಹೊಸ ಅಧ್ಯಕ್ಷರ ನೇಮಕ ನಂತರ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ ಎಂದರು.