ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಜಾಲ ಪತ್ತೆ ಕಾರ್ಯಾಚರಣೆ । ಏಜೆಂಟ್, ಗರ್ಭಪಾತದ ಮಾತ್ರೆಗಳು, ಮಹತ್ವದ ಸಾಕ್ಷ್ಯ ವಶಕ್ಕೆ
ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಮಗು ಎಂದು ತಿಳಿದರೆ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಆರೋಪದ ಜಾಲವನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ ''''''''ಡಿಕಾಯ್'''''''' ಕಾರ್ಯಾಚರಣೆ ಯಶಸ್ವಿಯಾಗಿದ್ದು, ಓರ್ವ ಮಹಿಳಾ ಏಜೆಂಟ್‌ನ್ನು ವಶಕ್ಕೆ ಪಡೆದು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಬೆಂಗಳೂರು ಹಾಗೂ ಮಂಡ್ಯ ಭಾಗಗಳಿಂದ ಗರ್ಭಿಣಿಯರನ್ನು ಜಿಲ್ಲೆಯ ಚಿಂತಾಮಣಿ ನಗರಕ್ಕೆ ಕರೆತಂದು ಭ್ರೂಣ ಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪಿಸಿ-ಪಿಎನ್‌ಡಿಟಿ ವಿಭಾಗದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಕಳೆದ ಒಂದು ವಾರದಿಂದ ರಹಸ್ಯ ಕಾರ್ಯಾಚರಣೆ ರೂಪಿಸಿದ್ದರು.ಕಾರ್ಯಾಚರಣೆಯ ಭಾಗವಾಗಿ ಆರೋಗ್ಯ ಇಲಾಖೆಯ ತಂಡ ನಕಲಿ ಗರ್ಭಿಣಿಯೊಬ್ಬರನ್ನು ಸಿದ್ಧ ಗೊಳಿಸಿ ಜಯಲಕ್ಷ್ಮಿ ಎಂಬ ಏಜೆಂಟ್ ಸಂಪರ್ಕಿಸಿತ್ತು. ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕಾಗಿ 35,000 ರು.ಗಳನ್ನು ನೀಡುವಂತೆ ಏಜೆಂಟ್ ಬೇಡಿಕೆ ಇಟ್ಟಿದ್ದು, ಬಳಿಕ ಗರ್ಭಿಣಿಯನ್ನು ಕಾರಿನಲ್ಲಿ ಚಿಂತಾಮಣಿಯ ಕೇಂದ್ರವೊಂದಕ್ಕೆ ಕರೆತಂದಿದ್ದಳು ಎನ್ನಲಾಗಿದೆ.
ಕಾರ್ಯಾಚರಣೆ ವೇಳೆ ಏಜೆಂಟ್ ಜೊತೆಗಿನ ದೂರವಾಣಿ ಸಂಭಾಷಣೆಯ ಆಡಿಯೋ ದಾಖಲೆಗಳು, ಗರ್ಭಿಣಿಯರ ಹೇಳಿಕೆಗಳು ಹಾಗೂ ಏಜೆಂಟ್ ಬ್ಯಾಗ್‌ನಲ್ಲಿದ್ದ ಗರ್ಭಪಾತದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.
ಇಂದಿನ ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದಭಾವಕ್ಕೆ ಅವಕಾಶವಿಲ್ಲ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಭ್ರೂಣ ಹತ್ಯೆ ಗಂಭೀರ ಅಪರಾಧವಾಗಿದ್ದು, ಇಂತಹ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.