ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈಗಾಗಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮನವಿ ಮಾಡಲಾಗಿದ್ದು, ರಾಜ್ಯದಲ್ಲಿ ಬೇರೆ ಪಕ್ಷ ಹಾಳು ಮಾಡಿದವರನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗಿದೆ. ಸತ್ತರೂ ಕಾಂಗ್ರೆಸ್ ಬರಲ್ಲವೆಂದು ಹೇಳುತ್ತಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಇದ್ದಾಗಲಾಗಲೀ ಇಲ್ಲವೇ ಸತ್ತ ಮೇಲಾಗಲಿ ಕಾಂಗ್ರೆಸ್‌ಗೆ ಬರುವ ಅವಶ್ಯಕತೆಯಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.ಬನಹಟ್ಟಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳರು ರಾಜಕೀಯ ಮಿತ್ರರು, ಪಕ್ಷಕ್ಕೆ ಮುಜುಗರವಾಗುವ ನಿಟ್ಟಿನಲ್ಲಿ ತೊಡಗಿದರೆ ಉಚ್ಚಾಟನೆ ಖಚಿತವೆಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದವರು. ಮಾಜಿ ಮುಖ್ಯಮಂತ್ರಿ ರಾಜ್ಯದಲ್ಲಿ ಬಿಜೆಪಿಯನ್ನು ಕೆಳಹಂತದಿಂದ ಕಟ್ಟಿದವರು ಅವರಿಗೆ ಗೌರವ ನೀಡಬೇಕಿತ್ತು. ಬದಲಾಗಿ ಸಂಸ್ಕೃತಿ ಬಿಟ್ಟು ನಡೆದುಕೊಳ್ಳುವುದರಿಂದ ಹೀಗಾಗುವುದು. ಇಷ್ಟೆಂದ ಮಾತ್ರಕ್ಕೆ ನೈತಿಕತೆ ಬಿಟ್ಟು ರಾಜಕಾರಣ ಮಾಡಬಾರದಂತಲ್ಲ. ಬಿಎಸ್‌ವೈಗೆ ಗೌರವ ನೀಡಿ, ವಿಜಯೇಂದ್ರರಿಗೆ ಬಗ್ಗಬೇಡಿ ಎಂದು ಎಸ್.ಜಿ. ನಂಜಯ್ಯನಮಠ ಯತ್ನಾಳರಿಗೆ ಸಲಹೆ ನೀಡಿದರು.
ಪಕ್ಷ ಸಂಘಟನೆಗೆ ಒತ್ತು: ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಬೇರು ಮಟ್ಟದಲ್ಲಿ ಹೊಸ ಪಡೆ ರಚಿಸುವ ಮೂಲಕ ಮುಂಬರುವ ಜಿಪಂ, ತಾಪಂ ಹಾಗೂ ನಗರಸಭೆ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳ ಆಯ್ಕೆಗೆ ಹೊಸ ಅಯಾಮ ನೀಡಲು ಎಲ್ಲ ಪ್ರಮುಖರು ಮುಂದಾಗಬೇಕೆಂದ ಅವರು, ಸುಭದ್ರ ಸಂಘಟನೆಗಾಗಿ ನಗರ, ಕ್ಷೇತ್ರ ಬ್ಲಾಕ್ ಕಮಿಟಿಯಂತೆ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಪಕ್ಷದ ಅಧಿಕಾರ ವಿಸ್ತರಣೆ ನಡೆಯಲಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬೂತ್ ಮಟ್ಟದಲ್ಲಿ ೧೫-೨೦ ಸದಸ್ಯರೊಂದಿಗೆ ಸಮಿತಿ ರಚನೆ ಮಾಡುವ ಮೂಲಕ ಸಂಘಟನೆಯ ಶಕ್ತಿ ಹಾಗೂ ಒತ್ತು ನೀಡುವಲ್ಲಿ ಶ್ರಮಿಸಬೇಕೆಂದರು. ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯೊಂದಿಗೆ ಪಕ್ಷಕ್ಕೆ ಬಲ ತುಂಬುವ ಕಾರ್ಯವಾಗಬೇಕೆಂಬ ಉದ್ದೇಶ ಪಕ್ಷದ ಹೈಕಮಾಂಡದ್ದಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.ಸಿದ್ದು ಕೊಣ್ಣೂರ, ಡಾ.ಎ.ಆರ್. ಬೆಳಗಲಿ, ಪ್ರವೀಣ ನಾಡಗೌಡ, ರಾಜೇಂದ್ರ ಭದ್ರನ್ನವರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ವೆಂಕನಗೌಡ ಪಾಟೀಲ, ಭೀಮಶಿ ಮಗದುಮ್, ನೀಲಕಂಠ ಮುತ್ತೂರ, ನೀಲೇಶ ದೇಸಾಯಿ, ಸಾದಿಕ್ ಬೇಪಾರಿ, ಹರ್ಷವರ್ಧನ ಪಟವರ್ಧನ, ಸಂಜಯ ಜೋತಾವರ, ಸಂಗಮೇಶ ಮಡಿವಾಳ, ಭೀಮಶಿ ಪಾಟೀಲ, ಶಂಕರ ಕೆಸರಗೊಪ್ಪ, ರವಿ ಬಾಡಗಿ ಸೇರಿದಂತೆ ಅನೇಕರಿದ್ದರು.ಬೆಲೆ ಏರಿಕೆ ಅನಿವಾರ್ಯ. ಬಡವರ ಗ್ಯಾರಂಟಿ ಯೋಜನೆ ವಾರ್ಷಿಕ ₹೬೦ ಸಾವಿರ ಕೋಟಿಯಷ್ಟಿದೆ. ಅನುಕೂಲವಾದವರಿಂದ ಅನಾನುಕೂಲವಾದವರಿಗೆ ನೀಡುವುದೇ ರಾಜನೀತಿ. ಕೆಲ ದೈನಂದಿನ ವಸ್ತುಗಳ ಬೆಲೆ ಏರಿಕೆ ನನಗೂ ಬೇಸರ ತಂದಿದೆ. ಮುಖ್ಯಮಂತ್ರಿಗಳಿಗೆ ಮನವಿಯೊಂದಿಗೆ ಹಾಲು, ಮೊಸರಿನ ದರ ₹೪ ಬದಲು ₹೨ ಹೆಚ್ಚಳ ಮಾಡಿ. ಹೀಗೆ ಅನೇಕ ಬಡವರ ಪಾಲಿನ ವಸ್ತುಗಳ ಏರಿಕೆಯಲ್ಲಿ ರಿಯಾಯ್ತಿಗೆ ಮನವಿ ಮಾಡಲಾಗುವುದು.
ಎಸ್.ಜಿ. ನಂಜಯ್ಯನಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷ