ವಕ್ಫ್‌ ಹೆಸರಿನಲ್ಲಿ ಲ್ಯಾಂಡ್‌ ಜಿಹಾದ್‌ಗಿಳಿದ ಕಾಂಗ್ರೆಸ್‌: ಬಿಜೆಪಿ ಆರೋಪ

KannadaprabhaNewsNetwork | Updated : Nov 05 2024, 12:48 AM IST

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲಾ ಕುಕೃತ್ಯಗಳಿಗೂ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ನೇರವಾಗಿ ಕುಮ್ಮಕ್ಕು ಕೊಡುತ್ತಿರುವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಬಿಜೆಪಿ ದೂರಿದೆ.

ಕನ್ನಡಪ್ರಭ ವಾರ್ತೆ, ಬೀದರ್‌

ಮಠ, ಮಂದಿರ, ರೈತರ ಜಮೀನನ್ನು ವಕ್ಫ್ ಹೆಸರಿಗೆ ಪಹಣಿಯಲ್ಲಿ ಇಂದೀಕರಿಸುವ ಮೂಲಕ ರಾಜ್ಯದ ಕಾಂಗ್ರೆಸ್‌ ಸರ್ಕಾರ ಲ್ಯಾಂಡ್‌ ಜಿಹಾದ್‌ಗೆ ಇಳಿದಿದೆ ಎಂದು ಆರೋಪಿಸಿ ಬಿಜೆಪಿಯಿಂದ ಸೋಮವಾರ ಜಿಲ್ಲಾ ಕೇಂದ್ರ ಬೀದರ್‌ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಬೀದರ್‌ ನಗರದ ಗಣೇಶ ಮೈದಾನದಿಂದ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ನೇತೃತ್ವದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ.ಅಂಬೇಡ್ಕರ್‌ ವೃತ್ತದ ಮೂಲಕ ಬೀದರ್‌ ತಹಸೀಲ್ದಾರ್‌ ಕಚೇರಿಗೆ ತೆರಳಿ ಮುತ್ತಿಗೆ ಹಾಕುವ ಪ್ರಯತ್ನವನ್ನು ಬೀದರ್‌ ಹಾಗೂ ಗ್ರಾಮೀಣ ಮಂಡಲ ಮುಖಂಡರು ಹಾಗೂ ಕಾರ್ಯಕರ್ತರು ನಡೆಸಿದರಾದರು ಬಿಗಿ ಪೊಲೀಸ್‌ ಬಂದೋಬಸ್ತ್‌ನಿಂದಾಗಿ ಅದು ಸಫಲವಾಗಲಿಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ರಾಜ್ಯ ಸರ್ಕಾರ ಕೋಮು ದ್ವೇಷವನ್ನು ಹರಡಿಸುವಲ್ಲಿ ಮುಸ್ಲಿಂ ಸಮುದಾಯವದವರ ಓಲೈಕೆಗೆ ಮುಂದಾಗಿ ವಕ್ಫ್‌ ರಾದ್ಧಾಂತವನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ ಮಾತನಾಡಿ, ವಕ್ಫ ಕುರಿತು ಕೇಂದ್ರದ ಜಂಟಿ ಸಂಸದೀಯ ಮಂಡಳಿಯ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗು ವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್‌ ಮಂಡಳಿ ತನ್ನ ಕರಾಳ ಕೈಚಳಕವನ್ನು ತೋರುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲಾ ಕುಕೃತ್ಯಗಳಿಗೂ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ನೇರವಾಗಿ ಕುಮ್ಮಕ್ಕು ಕೊಡುತ್ತಿರು ವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರವು ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ಕಾಂಗ್ರೆಸ್‌ ಸರ್ಕಾರ ಕೈಗೊಳ್ಳುವ ಮತ್ತು ಮತ ಬ್ಯಾಂಕ್‌ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುವ ತನ್ನ ಹಳೇ ಚಾಳಿಯನ್ನು ಕೈಬಿಡಬೇಕೆಂದು ಬಿಜೆಪಿ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ತುಘಲಕ್‌ ದರ್ಬಾರ್‌:ದೇಶದ ಬೆನ್ನೆಲುಬು ರೈತರ ಫಲವತ್ತಾದ ಕೃಷಿ ಭೂಮಿ, ಮಠ ಮಂದಿರ, ಚರ್ಚ್‌, ಮಸೀದಿ ಎಲ್ಲಾ ಸಮಾಜದ ಪ್ರಾರ್ಥನಾ ಸ್ಥಳಗಳು, ಬಡಜನರ ಆಸ್ತಿ ಹಾಗೂ ಸರ್ಕಾರಿ ಬೆಲೆ ಬಾಳುವ ಗೋಮಾಳ ಮತ್ತು ವಾಣಿಜ್ಯ ಉದ್ಯಮಕ್ಕೆ ಮೀಸಲಿಟ್ಟ ಭೂಮಿಯನ್ನು ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರನ್ನು ಸೇರಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತುಘಲಕ್‌ ದರ್ಬಾರ್‌ ನಡೆಸುತ್ತಿದೆ ಎಂದು ಬಿಜೆಪಿ ಪ್ರಮುಖರು ಆರೋಪಿಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ, ಬಿಜೆಪಿ ವಿಭಾಗೀಯ ಪ್ರಮುಖರಾದ ಈಶ್ವರಸಿಂಗ್‌ ಠಾಕೂರ್‌, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್‌ ಗಾದಗಿ, ಪೀರಪ್ಪ ಔರಾದೆ, ನಗರ ಅಧ್ಯಕ್ಷ ಶಶಿಧರ ಹೋಸಳ್ಳಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು, ಗುರುನಾಥ ರಾಜಗೀರಾ, ಬಿಜೆಪಿ ಗ್ರಾಮೀಣ ಮಂಡಲದ ರಾಜೆಂದ್ರ ಪೂಜಾರಿ, ಪ್ರಶಾಂತ ಮರಖಲ್, ನಾಗಶೇಟ್ಟಿ, ವಿಜಯಕುಮಾರ ಅನಕಲ್, ನಿಜಲಿಂಗಪ್ಪಾ ಪಾಟೀಲ್, ಸಿದ್ರಾಮ ಚಿಕಪೆಟ್, ಸಂತೋಷ ಕಾಳೆ. ಸೂರಜ್‌ ಸಿಂಗ್‌ ಠಾಕೂರ, ನಾಗೇಂದ್ರ ಪಾಟೀಲ್, ರಾಜಕುಮಾರ ಪಾಟೀಲ್, ಸ್ವಾಮಿದಾಸ ಕೆಂಪೇನೂರ, ಸಂದೀಪ ಪಸರಗೆ, ಶಿವಕುಮಾರ ಸ್ವಾಮಿಚಂದ್ರಯ್ಯ ಸ್ವಾಮಿ, ಸಂಜೀವ ಕುಮಾರ ಕೋಳಿ ಸೇರಿದಂತೆ ರೈತ ಸಂಘದ ಮುಖಂಡರು, ರೈತರು, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಮತ್ತಿತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಸಲ್ಲದು; ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ

ಭಾಲ್ಕಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ವಕ್ಫ್ ಅಕ್ರಮ ವಿರೋಧಿಸಿ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ತಹಶೀಲ್ದಾರ್ ಗೆ ಸಲ್ಲಿಸಿದರು.ನಂತರ ಮಾತನಾಡಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಭಾಲ್ಕಿ ತಾಲ್ಲೂಕಿನಲ್ಲಿ ಸುಮಾರು 800 ವರ್ಷದ ಇತಿಹಾಸವುಳ್ಳ ರಾಮೇಶ್ವರ ಟೇಕಣಿ ಜಮೀನನ್ನು ಕೂಡಾ ತನ್ನದೆಂದು ವಕ್ಫ್ ಬೋರ್ಡ ನೋಟಿಸ್ ನೀಡಿದೆ ಎಂದು ದೂರಿದರು.ಭಾಲ್ಕಿ ನಗರದ ರೈತರ ಸುಮಾರು 526 ಎಕರೆ ಜಮೀನು ಹಾಗೂ ತಾಲ್ಲೂಕಿನ ಧನ್ನೂರ (ಎಚ್), ಲಾಧಾ, ಲಖನಗಾಂವ, ತೆಲಗಾಂವ, ಕೋನಮೇಳಕುಂದಾ, ಕೇಸರಜವಳಗಾ, ನಿಟ್ಟೂರ (ಬಿ), ಮೇಹಕರ, ಗೋಧಿಹಿಪ್ಪರ್ಗಾ, ಗೋರಚಿಂಚೋಳಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 968 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ ಹೆಸರು ನಮೂದಿಸಲಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ ಪ್ರಮುಖರಾದ ಶಿವರಾಜ ಗಂದಗೆ, ಗೋವಿಂದರಾವ್ ಬಿರಾದಾರ, ಕಿರಣ ಖಂಡ್ರೆ, ಚೆನ್ನಬಸವಣ್ಣ ಬಳತೆ, ಶೀವು ಲೋಖಂಡೆ, ರಾಜಕುಮಾರ ದಾಡಗಿ, ಕಿಶನರಾವ್ ಪಾಟೀಲ ಇಂಚೂರಕರ್, ಕೆ.ಡಿ.ಗಣೇಶ, ಬಾಬುರಾವ್ ಧೂಪೆ, ವೆಂಕಟರಾವ್, ಡಿಗಂಬರರಾವ್ ಮಾನಕಾರಿ ಸೇರಿದಂತೆ ಇತರ ರೈತ ಮುಖಂಡರು ಇದ್ದರು.ಸಂಪುಟದಿಂದ ಸಚಿವ ಜಮೀರ್‌ ವಜಾಕ್ಕೆ ಬಿಜೆಪಿ ಆಗ್ರಹ, ಧರಣಿ

ಬಸವಕಲ್ಯಾಣ: ಅಲ್ಪಸಂಖ್ಯಾತರ ಓಲೈಕೆಗಾಗಿ ರೈತರ, ಜನಸಾಮಾನ್ಯರ ಭೂಮಿಯನ್ನು ವಕ್ಫ್‌ ಮಂಡಳಿಗೆ ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಹುನ್ನಾರದ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ ಎಂದು ಶಾಸಕ ಶರಣು ಸಲಗರ ಕರೆ ನೀಡಿದರು.

ಅವರು ನಗರದಲ್ಲಿ ವಕ್ಫ್‌ ಖಾತೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ನಡೆ ಖಂಡಿಸಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ವಕ್ಫ್‌ ಆಸ್ತಿ ಕುರಿತಾಗಿ ರಾಜ್ಯ ಸರ್ಕಾರ ಗೆಜೆಟ್‌ ಅಧಿಸೂಚನೆ ಹಿಂಪಡೆಯಬೇಕು ಹಾಗೂ ವಿವಾದಕ್ಕೆ ಕಾರಣರಾದ ಸಚಿವ ಜಮೀರ್‌ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದರು.ಬಸವಕಲ್ಯಾಣದಲ್ಲಿ 3000 ಸಾವಿರ ಏಕರೆಗೂ ಅಧಿಕ ವಕ್ಫ್‌ ಆಸ್ತಿ ಇದೆ ಎಂಬ ಮಾಹಿತಿ ಇದೆ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಕ್ಷೇತ್ರದ ಸಾಕಷ್ಟು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಹೆಸರು ಉಲೇಖವಿದೆ. ಹೊಲದ ಮೇಲೆ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಆಗುತ್ತಿಲ್ಲ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಜ್ಞಾನೇಶ್ವರ್ ಮೂಳೆ, ನಗರ ಅಧ್ಯಕ್ಷ ಸಿದ್ದು ಬಿರಾದಾರ್‌, ಸೂರ್ಯಕಾಂತ ಚಿಲ್ಲಾಬಟ್ಟೆ, ಬಿಜೆಪಿ ಹಿರಿಯ ನಾಯಕ ರಾಜಕುಮಾರ್ ಸಿರಗಾಪುರ್‌, ಶಿವಕುಮಾರ್‌ ಅಗರೆ, ರವಿ ಸ್ವಾಮಿ ನಾರಾಯಣಪೂರ ಮತ್ತಿತರರು ಇದ್ದರು.ಔರಾದ್‌ನಲ್ಲೂ ಶಾಸಕ ಪ್ರಭು ಚವ್ಹಾಣ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

ಔರಾದ್‌: ವಕ್ಫ್‌ ಮಂಡಳಿಯ ಹೆಸರಿನಲ್ಲಿ ರೈತರ ಜಮೀನು ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಶಾಸಕರಾದ ಪ್ರಭು ಚವ್ಹಾಣ್‌ ಅವರ ನೇತೃತ್ವದಲ್ಲಿ ಬಿಜೆಪಿ ಔರಾದ್‌ (ಬಿ) ಮಂಡಲ ವತಿಯಿಂದ ಔರಾದ್‌ನಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕಾರ್ಯಕರ್ತರು, ರೈತರು ಸೇರಿದಂತೆ ಸಾವಿರಾರು ಜನರೊಂದಿಗೆ ಪಟ್ಟಣದ ಎಪಿಎಂಸಿ ಬಳಿ ಆರಂಭವಾದ ಮೆರವಣಿಗೆ ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ತಾಲೂಕು ಆಡಳಿತಸೌಧದ ವರೆಗೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶಾಸಕರಾದ ಪ್ರಭು ಚವ್ಹಾಣ್‌ ಮಾತನಾಡಿ, ರೈತರಲ್ಲಿ ಆತಂಕ ಸೃಷ್ಟಿಸಿರುವ ವಕ್ಫ್‌ ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆ ಯಾಚಿಸಬೇಕು ಮತ್ತು ಸ್ಪಷ್ಟನೆ ಕೊಡಬೇಕು. ಇನ್ನು ಮುಂದೆ ಯಾವುದೇ ವಕ್ಫ್‌ ಅದಾಲತ್‌ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಹಿಂಪಡೆಯಬೇಕು. ಹಾಗೆಯೇ ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್‌ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್‌, ಮಂಡಲ ಉಸ್ತುವಾರಿ ಮಹೇಶ್ವರ ಸ್ವಾಮಿ, ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ಝಾಕೀರ್ ಶೇಖ್‌, ಶಿವಾಜಿರಾವ್‌ ಪಾಟೀಲ್‌ ಮುಂಗನಾಳ, ರಮೇಶ ಉಪಾಸೆ, ರಂಗರಾವ್‌ ಜಾಧವ, ಬಸವರಾಜ ಪಾಟೀಲ್‌ ಕಮಲನಗರ, ಸಚಿನ ರಾಠೋಡ್‌, ಪ್ರದೀಪ ಪವಾರ್, ವೈಜಿನಾಥ ಗುಡ್ಡಾ, ಈರಾ ರೆಡ್ಡಿ, ಗೋವಿಂದರೆಡ್ಡಿ ಕಸಬೆ, ಸಂತೋಷ ಪೋಕಲವಾರ, ದಯಾನಂದ ಘುಳೆ, ಕೇರಬಾ ಪವಾರ, ಸಂಜು ವಡೆಯಾರ್, ಅಶೋಕ ಅಲ್ಮಾಜೆ, ಗೀತಾ ಗೌಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು.ವಕ್ಫ್‌ ಮಂಡಳಿಯ ವಿರುದ್ಧ ಹುಮನಾಬಾದಲ್ಲೂ ಆಕ್ರೋಶಹುಮನಾಬಾದ್‌: ಮಠ ಮಂದಿರ, ಸಾರ್ವಜನಿಕ ಆಸ್ತಿ, ರೈತರ ಜಮೀನು ಉಳಿವಿಗಾಗಿ ಎಲ್ಲರೂ ಒಗ್ಗೂಡಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿರ್ವಾಯವಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಹೇಳಿದರು.ಅವರು ಪಟ್ಟಣದ ತೇರು ಮೈದಾನದಿಂದ ಡಾ. ಅಂಬೇಡ್ಕರ್‌ ವೃತ್ತ, ಪಂಡಿತ ಶಿವಚಂದ್ರ ನೆಲ್ಲಗಿ ವೃತ್ತದ ಮೂಲಕ ತಹಸೀಲ್‌ ಕಚೇರಿ ವರೆಗೆ ದೇವಾಲಯ ಆಸ್ತಿ, ರೈತರ ಜಮೀನಿನ ಉಳಿವಿಗಾಗಿ ವಕ್ಫ್‌ ವಿರುದ್ಧ ಬಿಜೆಪಿ ಹುಮನಾಬಾದ್‌ ಮಂಡಲದಿಂದ ವಕ್ಫ್‌ ಹಟಾವೋ ಕಿಸಾನ್‌ ಬಚಾವೋ ಆಂದೋಲನ ಮೂಲಕ ಹುಮನಾಬಾದ್‌ ತಹಸಿಲ್ ಕಚೇರಿ ಮುತ್ತಿಗೆ ಹಾಕುವ ಪ್ರತಿಭಟನಾ ಮೆರವಣಿಗೆ ಸಂದರ್ಭ ಮಾತನಾಡಿದರು.

ಜಮೀದ್‌ ಅಹ್ಮದ್‌ ಅವರನ್ನು ಸಚಿವ ಸ್ಥಾನದಿಂದ ಉಚ್ಚಾಟಿಸಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆ ಕೇಳಿ ಸ್ಪಷ್ಟನೆ ನೀಡಬೇಕು, ವಕ್ಛ ಅದಾಲಲ್‌ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬೇಕು. ಇದಕ್ಕೆ ಸಂಬಂಧ ಅಧಿಸೂಚನೆ ಹಿಂಪಡೆಯಬೇಕು, ಕೇಂದ್ರ ಸರ್ಕಾರ ತರುವ ವಕ್ಛ ತಿದ್ದುಪಡಿ ಕಾಯ್ದೆಗೆ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕೆಂದು ತಹಸೀಲ್ದಾರ್‌ಗೆ ಬರೆದ ಮನವಿ ಪತ್ರ ಸಲ್ಲಿಸಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಸಿಮ್‌ ಅಲಿ, ಕರಬಸಪ್ಪ, ಸಿದ್ದಣ್ಣ ಭೂಶಟ್ಟಿ, ಸತೀಷ ನನ್ನೂರೆ, ರಾಮರಾವ್‌ ಖೇರೋಜಿ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಕುಂಬಾರ, ಮಲ್ಲಿಕಾರ್ಜುನ ಸೀಗಿ, ಪ್ರಭಾಕರ ನಾಗರಾಳೆ, ಶಿವಾನಂದ ಮಂಠಾಳಕರ, ಅನೀಲ್‌ ಪಸರ್ಗಿ ಮತ್ತಿತರರು ಇದ್ದರು.

Share this article