ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕು ಚಂದಗಾಲು ಗ್ರಾಮದ ಸರ್ಕಾರಿ ಶಾಲಾ ಜಮೀನನ್ನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಮೈಸೂರು ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನ.7ರಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿ, ಚಂದಗಾಲು ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಸ.ನಂ.215ರಲ್ಲಿರುವ 30 ಗುಂಟೆ ಜಮೀನನ್ನು ಪಹಣಿಯಲ್ಲಿ ಕಂದಾಯ ಇಲಾಖೆ ಖಬರ್‌ಸ್ಥಾನ್‌ಗೆ ಸೇರ್ಪಡೆ ಮಾಡಿದ್ದು, ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿ ಆತಂಕಕ್ಕೆ ಒಳಗಾಗಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕರು ಹಾಗೂ ಗ್ರಾಮಸ್ಥರ ಜೊತೆಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದು, 1943ರಿಂದ ಚಂದಗಾಲು ಗ್ರಾಮದಲ್ಲಿ ಸರ್ಕಾರಿ ಶಾಲೆ ಇದೆ. 65 ವರ್ಷದಿಂದ ಸರ್ಕಾರಿ ಶಾಲೆಯ ಹೆಸರು ಪಹಣಿಯಲ್ಲಿ ನಮೂದಾಗಿದೆ. ಈ ವರ್ಷ ದಿಢೀರನೇ ಖಬರ್‌ಸ್ಥಾನ್‌ಗೆ ಸೇರಿದ್ದು ಎಂದು ಪಹಣಿ ಬದಲಾಗಿರುವುದು ಆತಂಕ ಮೂಡಿಸಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸಂವಿಧಾನಿಕ ನಡೆ ಅನುಸರಿಸುತ್ತಿದೆ. ಹಿಂದೂ ದೇವಾಲಯಗಳು ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಭೂಮಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಸೇರ್ಪಡೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ಒಲೈಕೆ ರೈತರನ್ನು ಒಕ್ಕಲಬ್ಬಿಸುವ ತಂತ್ರವಾಗಿದೆ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಭೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಸರ್ಕಾರಿ ಜಾಗಗಳು, ಸ್ಮಶಾನಗಳನ್ನು ವಕ್ಫ್ ಬೋರ್ಡ್‌ಗೆ ಸೇರ್ಪಡೆ ಮಾಡುವುದನ್ನು ಖಂಡಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪುರಸಭೆ ಸದಸ್ಯ ಎಸ್. ಪ್ರಕಾಶ್, ಗಂಜಾಂ ಶಿವು, ಬಿಜೆಪಿ ಮುಖಂಡ ಶಾಮಿಯಾನ ಪುಟ್ಟರಾಜು, ಗ್ರಾ.ಪಂ. ಸದಸ್ಯ ಶಿವಕುಮಾರ್, ರಮೇಶ್, ಮುಖಂಡರಾದ ಗಂಗರಾಜು, ದಾಸೇಗೌಡ, ಸಿ.ಕೆ. ಶಂಕರ್, ಸತ್ಯನಾರಾಯಣ, ಸಿ.ಎಸ್. ಶ್ರೆನಿವಾಸ್, ರಾಮಕೃಷ್ಣ, ರಾಮಚಂದ್ರ, ರಾಮಚಂದ್ರಮೂರ್ತಿ, ಕೋಳಿರಾಜೇಶ್, ರಾಕೇಶ ಇತರರು ಹಾಜರಿದ್ದರು.