ಅಕ್ರಮ ಜೂಜು ಅಡ್ಡೆಗಳ ತಡೆಗೆ ಆಗ್ರಹಿಸಿ ಕರುನಾಡ ಸೇವಕರ ಪ್ರತಿಭಟನೆ

KannadaprabhaNewsNetwork | Published : Nov 5, 2024 12:47 AM

ಸಾರಾಂಶ

ಕಳೆದ ನ.೧ರಂದು ತಾಲೂಕಿನ ಬೂದನೂರು ಗ್ರಾಮದ ತ್ಯಾಗರಾಜು ಎಂಬ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಈತ ಕ್ರಿಕೆಟ್ ಬೆಟ್ಟಿಂಗ್, ಗದ್ದೆ ಬಯಲುಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಜೂಜು ಅಡ್ಡೆಗಳಿಂದ ಸಾಲದ ಕೂಪಕ್ಕೆ ಸಿಲುಕಿದ್ದ. ಸಾಲದಿಂದ ಪಾರಾಗಲಾಗದೇ ಇದ್ದುದಕ್ಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಅಕ್ರಮ ಜೂಜು ಅಡ್ಡೆಗಳು, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಹುಕ್ಕಾ ಸರಬರಾಜು ದಂಧೆಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಕರುನಾಡ ಸೇವಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು. ಕಳೆದ ನ.೧ರಂದು ತಾಲೂಕಿನ ಬೂದನೂರು ಗ್ರಾಮದ ತ್ಯಾಗರಾಜು ಎಂಬ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಈತ ಕ್ರಿಕೆಟ್ ಬೆಟ್ಟಿಂಗ್, ಗದ್ದೆ ಬಯಲುಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಜೂಜು ಅಡ್ಡೆಗಳಿಂದ ಸಾಲದ ಕೂಪಕ್ಕೆ ಸಿಲುಕಿದ್ದ. ಸಾಲದಿಂದ ಪಾರಾಗಲಾಗದೇ ಇದ್ದುದಕ್ಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಸಾವಿಗೆ ಅಕ್ರಮ ಜೂಜು ಅಡ್ಡೆಗಳು ಹಾಗೂ ಅವುಗಳಿಗೆ ಕಡಿವಾಣ ಹಾಕದ ಪೊಲೀಸರ ಬೇಜವಾಬ್ದಾರಿತನವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಸಂಘಟಿತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗದ್ದೆ ಬಯಲುಗಳಲ್ಲಿ ಇಸ್ಪೀಟು ಜೂಜು ಅಡ್ಡೆಗಳಿಗೆ ರಾಜಕೀಯ ನಾಯಕರು ಹಾಗೂ ಪೊಲೀಸ್ ಇಲಾಖೆಯೇ ಮಹಾಪೋಷಕರಾಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದ್ದು, ಇಂತಹ ದಂಧೆಕೋರರಿಂದ ನಿಯಮಿತವಾಗಿ ಕಪ್ಪ ಕಾಣಿಕೆ ಪೊಲೀಸ್ ಠಾಣೆಗಳಿಗೆ ಸಂದಾಯವಾಗುತ್ತಿರುವುದರಿಂದಲೇ ಈ ದಂಧೆಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗಿದೆ ಎಂದು ಆರೋಪಿಸಿದರು.

ಇಂತಹ ಅಕ್ರಮ ದಂಧೆಗಳಿಂದಾಗಿ ಸಾವಿರಾರು ಯುವಕರು ಊರು ತೊರೆಯುವುದು ಇಲ್ಲವೇ ಆತ್ಮಹತ್ಯೆಯ ದಾರಿ ಹಿಡಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಬೂದನೂರಿನ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರನ್ನು ಅಮಾನತ್ತು ಮಾಡಬೇಕು. ಈ ಮೂಲಕ ಬೆಟ್ಟಿಂಗ್ ಹಾಗೂ ಜೂಜು ಮಾಫಿಯಾಕ್ಕೆ ಬಲವಾದ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.

ಬೆಟ್ಟಿಂಗ್ ದಂಧೆಕೋರರು ಹಾಗೂ ಗದ್ದೆ ಬಯಲು ಜೂಜು ಕೋರರನ್ನು ಮುಂದಿನ ಹದಿನೈದು ದಿನಗಳೊಳಗೆ ತಹಬದಿಗೆ ತರಬೇಕು. ತಪ್ಪಿದಲ್ಲಿ ಜಿಲ್ಲೆಯಲ್ಲಿ ವಿವಿದ ಸಂಘಟನೆಗಳೊಗೂಡಿ ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಎಂ.ಬಿ. ನಾಗಣ್ಣಗೌಡ, ಬೂದನೂರು ಸತೀಶ, ಟಿ.ಎಲ್.ಕೃಷ್ಣೇಗೌಡ, ಸಿ. ಕುಮಾರಿ, ಚಂದ್ರ, ಶಿವಳ್ಳಿ ಚಂದ್ರಶೇಖರ್, ಮಂಜಶೆಟ್ಟಿ, ಸಾತನೂರು ವೇಣುಗೋಪಾಲ್ ಇತರರಿದ್ದರು.

Share this article