ಬಸ್ ಸೌಲಭ್ಯ ಇಲ್ಲದೆ ಶಿಕ್ಷಣಕ್ಕೆ ಕುತ್ತು

KannadaprabhaNewsNetwork | Updated : Nov 05 2024, 12:47 AM IST

ಸಾರಾಂಶ

ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪಾಠ, ಪ್ರವಚನದಿಂದ ವಂಚಿತರಾಗುತ್ತಿದ್ದಾರೆ. ಒಂದು ಬಸ್ಸಿನಲ್ಲಿ 2 ಬಸ್ಸಿನಷ್ಟು ಪ್ರಯಾಣಿಕರು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಹೆಚ್ಚಿನ ಬಸ್‌ ಸಂಚಾರಕ್ಕೆ ಮುಂದಾಗಿ ಸಮಸ್ಯೆ ಪರಿಹರಿಸಲು ಜನರು ಆಗ್ರಹಿಸಿದ್ದಾರೆ.

ವಿನ್ಸೆಂಟ್‌ ಎಂ.ಬಿ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಮರ್ಪಕ ಬಸ್ ಸೇವೆ ಇಲ್ಲದೆ ದಿನ ನಿತ್ಯ ನೂರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಹಾಜರಾತಿ ಮತ್ತು ಪಾಠ ಪ್ರವಚನದಿಂದ ವಂಚಿತರಾಗುತ್ತಿದ್ದಾರೆ.

ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದೆ. ರಾಷ್ಟ್ರೀಯ ಹೆದ್ದಾರಿಯು ನಗರದ ಮಧ್ಯಭಾಗದಲ್ಲಿ ಹಾದು ಹೋಗಿದೆ. ದಿನವೊಂದಕ್ಕೆ ನೂರಾರು ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತವೆ. ಬೆಳಗ್ಗಿನ ವೇಳೆ ಸಂಚರಿಸುವ ಹೊರ ಜಿಲ್ಲೆಯ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಪೂರ್ಣ ತುಂಬಿರುತ್ತದೆ. ಒಂದು ಬಸ್ಸಿನಲ್ಲಿ ಕನಿಷ್ಠ 2 ಬಸ್ಸಿನಷ್ಟು ಪ್ರಯಾಣಿಕರು ಉಸಿರುಗಟ್ಟಿದ ಸ್ಥಿತಿಯಲ್ಲಿ ಪ್ರಯಾಣಿಸುವುದು ಸಾಮಾನ್ಯ.

ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಹೆರೂರು, ಕಲ್ಲೂರು, 7ನೇಹೊಸಕೋಟೆ, ಸುಂಟಿಕೊಪ್ಪ, ಗರಗಂದೂರು, ಹರದೂರು, ಮತ್ತಿಕಾಡು, ಭೂತನಕಾಡು ಭಾಗಗಳಲ್ಲಿ ಕಾಡಾನೆ ಹಾವಳಿ. ಈ ನಡುವೆಯೂ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸುಂಟಿಕೊಪ್ಪಕ್ಕೆ ಆಗಮಿಸಿ ನಂತರ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೂಲಕ ಮಡಿಕೇರಿ ಮತ್ತು ಕುಶಾಲನಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಅನಿವಾರ್ಯತೆಯಿಂದ ಹತ್ತಾರು ಕಿ.ಮೀ ದೂರದ ಕುಗ್ರಾಮಗಳಿಂದ ನಡೆದು ಅಥವಾ ಬಾಡಿಗೆ ವಾಹನಗಳಲ್ಲಿ ಆಗಮಿಸುತ್ತಾರೆ. ಸರಿಯಾದ ಬಸ್ ಸೇವೆಗಳು ಇಲ್ಲದೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಾಧಿಸುವಂತಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಸಂಬಂಧಿಸಿದ ಮಡಿಕೇರಿ ಡಿಪೋ ವ್ಯವಸ್ಥಾಪಕರು ಹಾಗೂ ಶಾಸಕರು ಸಮಸ್ಯೆ ಬಗ್ಗೆ ಚಿಂತಿಸಿ ಈ ಮಾರ್ಗದಲ್ಲಿ ಬೆಳಗ್ಗಿನ ವೇಳೆ ಹೆಚ್ಚಿನ ಬಸ್ ಸಂಚಾರಕ್ಕೆ ಮುಂದಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.

ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಆಗ್ರಹ

ಮುಂದಿನ ಉಜ್ವಲ ಭವಿಷ್ಯ ರೂಪಿಸುವ ದಿಸೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಮಡಿಕೇರಿ ಮತ್ತು ಕುಶಾಲನಗರ ಶಾಲಾ ಕಾಲೇಜುಗಳಿಗೆ ಸೇರಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು, ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಆಗಮಿಸುವ ಎಲ್ಲ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿರುತ್ತಾರೆ. ಮಡಿಕೇರಿ ಭಾಗದಲ್ಲಿರುವ ಕಾಲೇಜುಗಳಿಗೆ 10 ಗಂಟೆಯವರೆಗೂ ಬಸ್ ದೊರೆಯದೆ ವಾರದ 3 4 ದಿನಗಳು ಪಾಠ, ಪ್ರವಚನ ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ ಶರೀಫ್ ಆಗ್ರಹಿಸಿದ್ದಾರೆ.

ಸುಂಟಿಕೊಪ್ಪ ಭಾಗದಿಂದ ಕುಶಾಲನಗರ ಮತ್ತು ಮಡಿಕೇರಿ ಭಾಗಗಳಿಗೆ ತೆರಳಲು ಬೆಳಗ್ಗೆ 8 ಗಂಟೆಯಿಂದ 9.30 ರವರೆಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಬೇಕು. ಈ ಸಂಬಂಧ ಮಡಿಕೇರಿ ಡಿಪೋ ವ್ಯವಸ್ಥಾಪಕರು ಗಮನಹರಿಸಬೇಕು ಎಂದು ಪಂಚಾಯಿತಿ ಸದಸ್ಯ ಕೆ.ಎಂ.ಆಲಿಕುಟ್ಟಿ ಹೇಳಿದರು.

ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಮಡಿಕೇರಿ ಮತ್ತು ಕುಶಾಲನಗರ ಶಾಲಾ ಕಾಲೇಜುಗಳಿಗೆ ಪೋಷಕರು ಸೇರಿಸುತ್ತಿದ್ದಾರೆ. ಕುಗ್ರಾಮಗಳಿಂದ ಆಗಮಿಸುವ ಮಕ್ಕಳು ಬೆಳಗ್ಗೆ ಮನೆ ಬಿಟ್ಟರೆ ಇಳಿಸಂಜೆ ವೇಳೆ ಮನೆಗೆ ತಲುಪುತ್ತಾರೆ. ಭವಿಷ್ಯದ ದಿಸೆಯಲ್ಲಿ ಬೆಳಗ್ಗೆ 8ರಿಂದ 9.30ರ ವೇಳೆಗೆ ಹೆಚ್ಚಿನ ಬಸ್ಸುಗಳು ಸಂಚರಿಸಿದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿ ಎಂದು ಎಸ್‌ಡಿಟಿಯು ಜಿಲ್ಲಾಧ್ಯಕ್ಷ ಶರೀಫ್ (ಅಣ್ಣಾ) ಹೇಳಿದರು.

Share this article